ನವದೆಹಲಿ: ಕೇಜ್ರಿವಾಲ್ ಒಬ್ಬ ಆದರ್ಶವಾದಿ. ಮುಖ್ಯಮಂತ್ರಿಯಾದ ನಂತರ ಯಾವುದೇ ತಪ್ಪು ಹೆಜ್ಜೆಗಳನ್ನು ಇಟ್ಟಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹೊಗಳಿದ್ದಾರೆ.
ಕೇಜ್ರಿವಾಲ್ ಸ್ವಚ್ಛ ವ್ಯಕ್ತಿತ್ವ ಹೊಂದಿರುವ ಒಬ್ಬ ಆದರ್ಶವಾದಿ. ರಾಜಕೀಯದಲ್ಲಿ ಉತ್ತಮ ನಡತೆಯ ಮೌಲ್ಯ ಹೊಂದಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಜ್ರಿವಾಲ್ ಯಾವುದೇ ತಪ್ಪು ಹೆಜ್ಜೆಗಳನ್ನು ಇಟ್ಟಿಲ್ಲ. ಇತ್ತೀಚೆಗೆ ತಂದ ಸಮ-ಬೆಸ ನಿಯಮ ಉತ್ತಮವಾಗಿದೆ. ದೇಶದಲ್ಲಿ ವಾಯು ಮಾಲಿನ್ಯ ಮತ್ತು ಟ್ರಾಫಿಕ್ ಒತ್ತಡ ತಗ್ಗಿಸಲು ಎಲ್ಲಾ ದೊಡ್ಡ ನಗರಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಬೇಕು ಎಂದು ಅಣ್ಣಾ ಹಜಾರೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೇಜ್ರಿವಾಲ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನನ್ನ ಜತೆಗಾರ. ರಾಜಕೀಯದಲ್ಲಿ ಒಳ್ಳೆಯ ವ್ಯಕ್ತಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಕೂಡ ಆದರ್ಶ ರಾಜಕಾರಣಿ. ನಮ್ಮ ದೇಶದಲ್ಲಿ ದುಡ್ಡಿನ ಪ್ರಭಾವವಿಲ್ಲದ ರಾಜಕೀಯವನ್ನು ಬಯಸುತ್ತೇನೆ ಎಂದು ಅಣ್ಣಾ ತಿಳಿಸಿದ್ದಾರೆ.