ರಾಷ್ಟ್ರೀಯ

ಭಾರತೀಯರನ್ನು ಒಗ್ಗೂಡಿಸಿ, ಮುನ್ನಡೆಸುವ ಶಕ್ತಿ ಸಂವಿಧಾನಕ್ಕಿದೆ: ಪ್ರಧಾನಿ ಮೋದಿ

Pinterest LinkedIn Tumblr

modiನವದೆಹಲಿ: ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ಸಂವಿಧಾನದ ಮೇಲೆ ನಿಂತಿದ್ದು, ನಮ್ಮೆಲ್ಲರನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಸಂವಿಧಾನಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತ ದೇಶದ ಸಂವಿಧಾನ ರಚನೆ ಅತಿದೊಡ್ಡ ಕೆಲಸವಾಗಿದೆ. ದೇಶದಲ್ಲಿ ಅನೇಕ ಧರ್ಮದವರು ವಾಸಿಸುತ್ತಿದ್ದಾರೆ. ದೇಶದಲ್ಲಿ 122ಕ್ಕೂ ಹೆಚ್ಚು ಭಾಷಿಕರಿದ್ದು, ಎಲ್ಲರನ್ನು ಒಗ್ಗೂಡಿಸಿ, ಮುನ್ನಡೆಸುವ ಶಕ್ತಿ ಸಂವಿಧಾನಕ್ಕಿದ್ದು, ಸಂವಿಧಾನದ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು.

ಸಂವಿಧಾನ ರಚನೆಯಲ್ಲಿ ಕೆಲವರ ಪಾತ್ರ ಮರೆಯಲಾಗದು ಅದರಲ್ಲೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪಾತ್ರ ದೊಡ್ಡದು. ಮಹಾಪುರುಷ ಅಂಬೇಡ್ಕರ್ ಗೆ ನನ್ನ ಅನಂತ ನಮನ. ಅವರ ದೂರದೃಷ್ಟಿ ಹಾಗೂ ಮಾರ್ಗದರ್ಶನ ಇಂದು ನಮ್ಮ ರಾಷ್ಟ್ರದ ಏಕತೆಗೆ ಕಾರಣವಾಗಿದ್ದು, ನಮ್ಮ ಸಂವಿಧಾನದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದರು.

ಹಿಂದಿನ ಸರ್ಕಾರ ಅವರ ತಪಸ್ಸು ಹಾಗೂ ದೇಶ ಕಂಡ ಎಲ್ಲ ಪ್ರಧಾನಿಗಳ ಸೇವೆಯಿಂದ ದೇಶ ಅಭಿವೃದ್ಧಿಯಾಗಿದೆ. ಭಾರತ ದೇಶವನ್ನು ರಾಜ-ಮಹಾರಾಜರು ಕಟ್ಟಿಲ್ಲ. ರೈತರು, ಕಾರ್ಮಿಕರು, ಬಡವರು ದೇಶವನ್ನು ಕಟ್ಟಿದ್ದಾರೆ ಎಂದು ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಹೇಳಿದ್ದೆ ಎಂದರು.

ಸಂವಿಧಾನದ ಮೇಲಿನ ಚರ್ಚೆಗೆ ಎಲ್ಲ ಸದಸ್ಯರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಸದನದ ಎಲ್ಲ ಸದಸ್ಯರಿಗೂ ಅಭಿನಂದನೆ ಎಂದರು. ಕಲಾಪದಲ್ಲಿ ಸಂವಿಧಾನದ ಮೇಲಿನ ಚರ್ಚೆ ಮಹತ್ವಪೂರ್ಣ ಚರ್ಚೆಯಾಗಿದೆ.

Write A Comment