ರಾಷ್ಟ್ರೀಯ

ಪುರಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ, 3 ರೈಲುಗಳಿಗೆ ಬೆಂಕಿ

Pinterest LinkedIn Tumblr

puri-trains-fireಭುವನೇಶ್ವರ್: ಒಡಿಶಾದ ಪುರಿ ರೈಲು ನಿಲ್ದಾಣದಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದ್ದು, ನಿಲ್ದಾಣದಲ್ಲಿದ್ದ 3 ರೈಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

3 ಎಕ್ಸ್ ಪ್ರೆಸ್ ರೈಲುಗಳ ಒಟ್ಟು 5 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ರೈಲ್ವೇ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪ್ರಸ್ತುತ ಅಗ್ನಿ ಅವಘಡದಲ್ಲಿ ಯಾವುದೇ  ಸಾವು-ನೋವು ಸಂಭವಿಸಿದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಪುರಿ-ನವದೆಹಲಿ ನಡುವೆ ಸಂಚರಿಸುವ ನಂದನ್ ಕಣನ್ ಎಕ್ಸ್ ಪ್ರೆಸ್, ಪುರಿ-ತಿರುಪತಿ ಎಕ್ಸ್ ಪ್ರೆಸ್ ಮತ್ತು ಪುರಿ-ಹೌರಾ ಎಕ್ಸ್ ಪ್ರೆಸ್  ರೈಲುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೇ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪ್ರಕಾಶ್ ಮಿಶ್ರಾ ಅವರು ತಿಳಿಸಿದ್ದಾರೆ.

ಫ್ಲ್ಟಾಟ್ ಫಾರ್ಮ್ ಸಂಖ್ಯೆ 6ರಲ್ಲಿ ನಿಂತಿದ್ದ  ನಂದನ್ ಕಣನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಪಕ್ಕದಲ್ಲಿದ್ದ ಪುರಿ-ತಿರುಪತಿ ಎಕ್ಸ್ ಪ್ರೆಸ್ ಮತ್ತು ನಂತರ  ಪುರಿ-ಹೌರಾ ಎಕ್ಸ್ ಪ್ರೆಸ್ ರೈಲಿನ ಬೋಗಿಗಳಿಗೂ ಬೆಂಕಿ ವ್ಯಾಪಿಸಿದೆ. ಪುರಿ-ಹೌರಾ ಎಕ್ಸ್ ಪ್ರೆಸ್ ರೈಲಿನ ಒಂದು ಬೋಗಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ಬೆಂಕಿಯನ್ನು ಪ್ರಸ್ತುತ ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದ್ದು, ಉಳಿದ ಎರಡು ರೈಲುಗಳಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲವಾದರೂ, ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment