ರಾಷ್ಟ್ರೀಯ

ಕೆಂಪೇಗೌಡರ ಕುರಿತು ಕಾರ್ನಾಡ್ ಹೇಳಿಕೆ ಸರಿಯಲ್ಲ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

siddu

ಬೆಂಗಳೂರು: ಕೆಂಪೇಗೌಡರ ಕುರಿತು ಸಾಹಿತಿ ಗಿರೀಶ್ ಕಾರ್ನಾಡ್ ನೀಡಿರುವ ಹೇಳಿಕೆ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಂಪೇಗೌಡರ ಬಗ್ಗೆ ಡಾ.ಗಿರೀಶ್ ಕಾರ್ನಾಡ್ ಹೇಳಿಕೆ ನೀಡಿರುವುದು ಸರಿಯಲ್ಲ. ಆದರೆ, ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಕಾರ್ನಾಡ್ ನೀಡಿರುವ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ. ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮುಖಾಂತರ ಆದಿಚುಂಚನಗಿರಿ ಮಠದ ಪೀಠಾಧಿಪತಿಯಾದ ನಿರ್ಮಾಲಾನಂದ ಶ್ರೀಗಳ ಜೊತೆ ಚರ್ಚೆ ನಡೆಸಿದ್ದು, ವಿವಾದವನ್ನು ಇಲ್ಲಿಗೆ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಇದು ಸರ್ಕಾರದ ಹೇಳಿಕೆಯಲ್ಲದಿರುವ ಕಾರಣ ಹಾಗು ಕಾರ್ನಾಡ್ ಅವರು ಈಗಾಗಲೆ ಇದಕ್ಕೆ ಕ್ಷಮೆಯಾಚಿಸಿರುವುದರಿಂದ ವಿವಾದವನ್ನು ಕೈಬಿಡುವಂತೆ ಸ್ವಾಮೀಜಿಗಳಿಗೆ ಕೇಳಿಕೊಂಡಿದ್ದು, ಕಾರ್ನಾಡ್ ಹೇಳಿಕೆಗೆ ವಿರೋಧಿಸಿ ಒಕ್ಕಲಿಗ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಈಗಾಗಲೇ ಹೆಸರಿಡಲಾಗಿದ್ದು, ಅದನ್ನು ಬೇರೆ ಹೆಸರಿನಿಂದ ಕರೆಯುವಂತಹ ವಿಚಾರ ಬರುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಕಾರ್ನಾಡ್ ಹೇಳಿಕೆಯಿಂದ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಕಾಮಲೆ ಕಣ್ಣು ಇರುವಂತಹವರು, ಅವರು ರಾಜಕೀಯವಾಗೇ ಎಲ್ಲವನ್ನೂ ನೋಡುತ್ತಾರೆ. ಅವರ ಕನ್ನಡಕಗಳೂ ರಾಜಕೀಯದ ಕನ್ನಡಕಗಳು. ಈ ವಿಷಯದಲ್ಲಿ ಬಿಜೆಪಿಯವರ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Write A Comment