ರಾಷ್ಟ್ರೀಯ

ಸ್ಕೈ ಡೈವ್: ಭಾರತದಲ್ಲಿ ನಿರ್ಲಕ್ಷಕ್ಕೆ ಒಳಗಾಗಿರುವ ಸ್ಕೈಡೈವರ್ ಶೀತಲ್ ಮಹಾಜನ್

Pinterest LinkedIn Tumblr

3sheetal_mahajanಹೊಸದಿಲ್ಲಿ, ಸೆ.23: ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಧನೆ, ಕೌಶಲದ ಮೂಲಕ ಗಮನ ಸೆಳೆದಿರುವ, 8 ಬಾರಿ ವಿಶ್ವ ದಾಖಲೆ, 14 ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ 2011ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿರುವ ಸ್ಕೈಡೈವರ್ ಶೀತಲ್ ಮಹಾಜನ್‌ರನ್ನು ತಾಯ್ನಿಡು ಭಾರತದಲ್ಲ್ಲಿ ಯಾರೂ ಗುರುತಿಸದೇ ಇರುವುದು ಕ್ರೀಡಾ ಕ್ಷೇತ್ರದ ವಿಪರ್ಯಾಸವಾಗಿದೆ.

655ಕ್ಕೂ ಅಧಿಕ ಜಂಪ್‌ಗಳಲ್ಲಿ ಭಾಗವಹಿಸಿರುವ ಕ್ರೀಡಾ ಸಾಹಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶೀತಲ್ ಸ್ಕೈಡೈವಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಪ್ಯಾರಾಚ್ಯೂಟ್ ಸಂಸ್ಥೆ ಶೀತಲ್‌ಗೆ ಎ,ಬಿ,ಸಿ ಹಾಗೂ ಡಿ ಲೈಸೆನ್ಸ್ ಹಾಗೂ ಕೋಚ್ ರೆಟಿಂಗ್ಸ್ ನ್ನು ನೀಡಿದೆ. ಇದು ಆಕೆ ವಿಶ್ವದೆಲ್ಲೆಡೆ ಸ್ಕೈಡೈವ್ ನಡೆಸಲು ಅವಕಾಶ ಕಲ್ಪಿಸಿದೆ. ಆದರೆ, ಸ್ಕೈಡೈವ್ ಕ್ರೀಡೆಯಲ್ಲಿ ಉಳಿಯಲು ಅವರು ಪ್ರಾಯೋಜಕರನ್ನು ಅವಲಂಬಿಸಬೇಕಾಗಿದೆ. ಪ್ರೋತ್ಸಾಹಕ್ಕಾಗಿ ಸರಕಾರದ ಮೊರೆ ಹೋಗಬೇಕಾಗಿದೆ. 2002ರಲ್ಲಿ ಸ್ಕೈಡೈವಿಂಗ್ ಆರಂಭಿಸಿರುವ ಶೀತಲ್ ವಿಭಿನ್ನ ವಾದುದನ್ನು ಸಾಧಿಸಲು ಬಯಸಿದ್ದರು. ಸ್ನೇಹಿತೆಯ ಸಹೋದರ ಏರ್‌ಫೋರ್ಸ್ ಅಧಿಕಾರಿ ಕಮಲ್ ಸಿಂಗ್‌ರಲ್ಲಿ ಸ್ಕೈಡೈವ್ ಬಗ್ಗೆ ಮಾಹಿತಿ ಪಡೆದರು. ಸ್ಕೈಡೈವ್‌ನಲ್ಲಿ ಪರಿಣತಿ ಪಡೆಯಲು ವಿದೇಶಕ್ಕೆ ತೆರಳಿದರು.

ಜೀವಕ್ಕೆ ಅಪಾಯ ತಂದೊಡ್ಡಬಲ್ಲ ಸ್ಕೈಡೈವಿಂಗ್‌ನಲ್ಲಿ ಶೀತಲ್ ಆಸಕ್ತಿ ವ್ಯಕ್ತಪಡಿಸಿದಾಗ ಆರಂಭದಲ್ಲಿ ಶೀತಲ್ ಹೆತ್ತವರು ಬೆಂಬಲ ನೀಡಲಿಲ್ಲ. ಬಳಿಕ ಶೀತಲ್ ಹೆತ್ತವರ ಮನವೊಲಿಸಲು ಯಶಸ್ವಿಯಾಗಿದ್ದರು.ಪ್ರಸ್ತುತ 14 ನ್ಯಾಶನಲ್ ಹಾಗೂ 5 ವಿಶ್ವ ದಾಖಲೆಗಳನ್ನು ನಿರ್ಮಿಸಿರುವ ಶೀತಲ್ 2004ರ ಎಪ್ರಿಲ್ 18 ರಂದು ನಾರ್ತ್ ಪೋಲ್‌ನಲ್ಲಿ ಸ್ಕೈಡೈವ್ ನಡೆಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಪೂರ್ವ ತರಬೇತಿಯಿಲ್ಲದೆ 37 ಡಿಗ್ರಿಗಿಂತ ಕಡಿಮೆ ಉಷ್ಣಾಂಶದಲ್ಲಿ 2400 ಅಡಿ ಎತ್ತರದಲ್ಲಿ ಡೈವಿಂಗ್ ನಡೆಸಿದ್ದರು. 2006ರಲ್ಲಿ ಮೊದಲ ಬಾರಿ ವಿಶ್ವ ದಾಖಲೆ ಬರೆದಿದ್ದರು. 2011ರಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ರಿಂದ ದೇಶದ ನಾಲ್ಕನೆ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
‘‘ನನ್ನ ಸಾಧನೆಯನ್ನು ಗಮನಿಸಿ ರಶ್ಯ ಸರಕಾರ ಪ್ರಮಾಣಪತ್ರ ನೀಡಿತ್ತು. ಆದರೆ, ಭಾರತ ಸರಕಾರ ಇದನ್ನು ಸ್ವೀಕರಿಸಲಿಲ್ಲ. ಆಗಿನ ಕ್ರೀಡಾ ಸಚಿವರಾದ ಸುನೀಲ್ ದತ್ತ್, ಭಾರತದಲ್ಲಿ ಇಂತಹ ಸರ್ಟಿಫಿಕೇಟ್‌ಗೆ ಬೆಲೆಯಿಲ್ಲ ಎಂದು ಹೇಳಿದ್ದರು. ಭಾರತದಲ್ಲಿ ಸ್ಕೈಡೈವಿಂಗ್‌ನ್ನು ಕ್ರೀಡೆಯಾಗಿ ಗುರುತಿಸಿಲ್ಲ ಎಂದು ಹೇಳಿದ್ದರು ಇದರಿಂದ ಹತಾಶನಾದ ನಾನು ಆಗ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂರನ್ನು ಭೇಟಿಯಾಗಿ ನನ್ನ ಸರ್ಟಿಫಿಕೇಟ್‌ಗಳನ್ನು ತೋರಿಸಿದೆ. ಕ್ರೀಡಾ ಸಚಿವಾಲಯ ನನ್ನ ಸಾಧನೆ ಗುರುತಿಸಲು ನಿರಾಕರಿಸಿದ್ದನ್ನು ಅವರಿಗೆ ತಿಳಿಸಿದೆ. ಭಾರತದ ರಾಷ್ಟ್ರಪತಿಯಾಗಿ ನಾನು ನಿನ್ನ ಸಾಧನೆಯನ್ನು ಗುರುತಿಸಿದ್ದೇನೆ. ಇನ್ನು ನಿನ್ನ ಸಾಧನೆಯನ್ನು ಇನ್ಯಾರು ಗುರುತಿಸುವ ಅಗತ್ಯವಿದೆ ಹೇಳು’’ ಎಂದು ನನಗೆ ಕಲಾಂ ತಿಳಿಸಿದ್ದರು ಎಂದು ಶೀತಲ್ ಹಳೆ ನೆನಪನ್ನು ಬಿಚ್ಚಿಟ್ಟರು.
ಭಾರತದಲ್ಲಿ ಸ್ಕೈಡೈವಿಂಗ್‌ಗೆ ಸರಿಯಾದ ನೀತಿ-ನಿಯಮವಿಲ್ಲದ ಕಾರಣ ಶೀತಲ್ ಸ್ಪೇನ್, ಫಿನ್‌ಲ್ಯಾಂಡ್, ಕ್ಯಾಲಿಫೋರ್ನಿಯ ಹಾಗೂ ಅರಿರೆನ(ಅಮೆರಿಕ)ದಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.
ಮಹಾರಾಷ್ಟ್ರ ಸರಕಾರ ಶೀತಲ್‌ಗೆ ಪುಣೆಯಲ್ಲಿ ಸ್ಕೈಡೈವಿಂಗ್ ಸಂಸ್ಥೆ ತೆರೆಯುವಂತೆ ಸಲಹೆ ನೀಡಿದೆ. ಸ್ಕೈಡೈವಿಂಗ್ ಅಕಾಡಮಿ ಆರಂಭಿಸುವ ಇರಾದೆಯಿದೆ. ನಾವು ಈಗಾಗಲೇ ನಾಲ್ಕು ರಾಜ್ಯಗಳಾದ ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಸಕ್ರಿಯವಾಗಿದ್ದೇವೆ. ಒಂದು ಬಾರಿ ಆಕಾಶಕ್ಕೆ ಹಾರಲು 20-22 ಸಾವಿರ ಖರ್ಚಾಗುತ್ತದೆ. ಆಕ್ಷಾಂಕ್ಷಿಗಳಿಂದ ನಮ್ಮ ಸಂಸ್ಥೆ 9-10 ಸಾವಿರ ರೂ. ಪಡೆಯುತ್ತದೆ ಎಂದು ಶೀತಲ್ ಹೇಳಿದ್ದಾರೆ.

Write A Comment