ರಾಷ್ಟ್ರೀಯ

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಟೆಕ್ಕಿಯ ಸಂಬಳ ಜುಜುಬಿ!

Pinterest LinkedIn Tumblr

soft-finalಹೊಸದಿಲ್ಲಿ,ಸೆ.21: ಭಾರತದಲ್ಲಿ ಟೆಕ್ಕಿಗಳೆಂದರೆ ಅವರಿಗೆ ಎಲ್ಲ ಕಡೆಯೂ ವಿಶೇಷ ಮಣೆಯನ್ನು ಹಾಕಲಾಗುತ್ತದೆ, ಹಾಗೆಯೇ ಬಾಡಿಗೆಮನೆ ಮಾಲಕನಿಂದ ಹಿಡಿದು ರಿಕ್ಷಾ ಚಾಲಕನವರೆಗೆ ಎಲ್ಲರ ಸುಲಿಗೆಗೆ ಸುಲಭದಲ್ಲಿ ತುತ್ತಾಗುವವರೂ ಅವರೇ. ಆದರೆ ವಿಶ್ವದ ಇತರೆಡೆಗಳಿಗೆ ಹೋಲಿಸಿದರೆ ಭಾರತೀಯ ಟೆಕ್ಕಿಗಳು ಪಡೆಯುತ್ತಿರುವ ಸಂಬಳ ಏನೂ ಅಲ್ಲ. ಟೆಕ್ಕಿಗಳಿಗೆ ಅತ್ಯಂತ ಕಡಿಮೆ ಸಂಬಳ ನೀಡುತ್ತಿರುವ ವಿಶ್ವದ ಹತ್ತು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಇಲ್ಲಿ ಮಧ್ಯಮ ಶ್ರೇಣಿಯ ಐಟಿ ಮ್ಯಾನೇಜರ್ ವಾರ್ಷಿಕ 41,213 ಡಾ.ಸಂಬಳ ಪಡೆಯುತ್ತಿದ್ದರೆ, ಸ್ವಿಝರ್‌ಲೆಂಡ್‌ನಲ್ಲಿ ಅದೇ ಹುದ್ದೆಯಲ್ಲಿರುವ ವ್ಯಕ್ತಿ ಅದರ ನಾಲ್ಕು ಪಟ್ಟು ವೇತನವನ್ನು ಜೇಬಿಗಿಳಿಸುತ್ತಾನೆ!
ನೇಮಕಾತಿ ಸಂಸ್ಥೆ ಮೈ ಹೈಯರಿಂಗ್ ಕ್ಲಬ್ ಡಾಟ್ ಕಾಂ ಈ ವರ್ಷ ವಿಶ್ವಾದ್ಯಂತ ಐಟಿ ಉದ್ಯೋಗಿಗಳ ವೇತನ ಕುರಿತು ನಡೆಸಿರುವ ಸಮೀಕ್ಷೆಯಂತೆ ಐಟಿ ಮ್ಯಾನೇಜರ್‌ಗಳಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಏಳನೆ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಗಿಳಿದಿದೆ.
ಭಾರತಿಯ ಐಟಿ ಮ್ಯಾನೇಜರ್‌ಗಳು ಸರಾಸರಿ 41,213 ಡಾ.ವೇತನ ಪಡೆಯುತ್ತಿದ್ದರೆ ಕನಿಷ್ಠ ಸ್ಥಾನದಲ್ಲಿರುವ ಬಲ್ಗೇರಿಯಾದಲ್ಲಿ ಜುಜುಬಿ 25,680 ಡಾ.ನೀಡಲಾಗುತ್ತಿದೆ. ವಿಯೆಟ್ನಾಂ(30,938 ಡಾ.) ಮತ್ತು ಥೈಲಂಡ್ (34,423 ಡಾ.) ಅದಕ್ಕಿಂತ ಕೊಂಚ ಉತ್ತಮ ಸ್ಥಿತಿಯಲ್ಲಿರುವ ರಾಷ್ಟ್ರಗಳಾಗಿವೆ. ನಂತರದ ಸ್ಥಾನಗಳಲ್ಲಿ ಇಂಡೋನೇಶ್ಯ(34,780 ಡಾ.), ಫಿಲಿಪ್ಪೀನ್ಸ್(37,534 ಡಾ.), ಚೀನಾ(42,689 ಡಾ.), ಝೆಕ್ ರಿಪಬ್ಲಿಕ್ (43,219 ಡಾ.) ಮತ್ತು ಅರ್ಜೆಂಟಿನಾ (51,380 ಡಾ.) ಇವೆ. ಇವುಗಳ ನಡುವೆ ಭಾರತ ಏಳನೆಯ ಸ್ಥಾನದಲ್ಲಿದೆ.
ಟೆಕ್ಕಿಗಳಿಗೆ ಅತಿ ಹೆಚ್ಚು ಸಂಬಳ ನೀಡುವ ರಾಷ್ಟ್ರಗಳಲ್ಲಿ ಸ್ವಿಝರ್‌ಲೆಂಡ್ ಅಗ್ರ ಸ್ಥಾನದಲ್ಲಿದೆ. ಅಲ್ಲಿ ಸರಾಸರಿ ವಾರ್ಷಿಕ 1,71,465 ಡಾ.ವೇತನ ಲಭಿಸುತ್ತಿದ್ದರೆ, 1,52,430 ಡಾ.ವೇತನದೊಂದಿಗೆ ಬೆಲ್ಜಿಯಂ ಎರಡನೆ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್(1,38,920 ಡಾ.), ಅಮೆರಿಕ(1,32,877 ಡಾ.) ಮತ್ತು ಬ್ರಿಟನ್(1,29,324 ಡಾ.)ಗಳಿವೆ.
ಕಡಿಮೆ ವೇತನಕ್ಕೆ ಸೇವೆ ಲಭ್ಯವೆಂಬ ಕಾರಣಕ್ಕಾಗಿ ಭಾರತ ಅತ್ಯಂತ ಮೆಚ್ಚುಗೆಯ ಹೊರಗುತ್ತಿಗೆ ತಾಣವಾಗಿದೆ, ಆದರೆ ಭವಿಷ್ಯದಲ್ಲಿ ಈ ಚಿತ್ರಣ ಸಂಪೂರ್ಣ ವಿರುದ್ಧವಾಗಬಹುದು ಎಂದು ಸಮೀಕ್ಷೆಯು ಹೇಳಿದೆ.
2015,ಆ.1-31ರ ಅವಧಿಯಲ್ಲಿ 40 ರಾಷ್ಟ್ರಗಳಲ್ಲಿನ ಒಟ್ಟೂ 9,413 ಐಟಿ ಕಂಪೆನಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

Write A Comment