ರಾಷ್ಟ್ರೀಯ

ಮಹಿಳೆಯರು ಮಾತ್ರ ಅಲ್ಲ ಪುರುಷರೂ ನೈಟ್ ಔಟ್ ಮಾಡುವುದು ನಮ್ಮ ಸಂಸ್ಕೃತಿಯಲ್ಲ: ಮಹೇಶ್ ಶರ್ಮಾ ಹೇಳಿಕೆ ಬೆಂಬಲಿಸಿದ ಸುಬ್ರಮಣಿಯನ್ ಸ್ವಾಮಿ

Pinterest LinkedIn Tumblr

subramanian_swami1ನವದೆಹಲಿ: ಮಹಿಳೆಯರು ನೈಟ್ ಔಟ್ ಮಾಡುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಹೇಳಿಕೆ ನೀಡಿದ ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ್ ಶರ್ಮಾ ಅವರಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬೆಂಬಲ ಸೂಚಿಸಿದ್ದಾರೆ.

ರಾತ್ರಿವೇಳೆ ಮೋಜು ಮಸ್ತಿ ಮಾಡುವುದು ಭಾರತದ ಮಹಿಳೆಯರಿಗೆ ಮತ್ತು ಗಂಡಸರಿಗೆ ಸಂಬಂಧಿಸಿದಂತೆ ಸರಿಯಲ್ಲ. ಭಾರತೀಯ ಸಂಸ್ಕೃತಿ ಪ್ರಕಾರ ಇಲ್ಲಿಯವರು ಬೆಳಗ್ಗೆ ಬೇಗನೆ ಏಳುವವರಾಗಿದ್ದಾರೆ.

ಮಹೇಶ್ ಶರ್ಮಾ ಸರಿಯಾಗಿಯೇ ಹೇಳಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುವುದಕ್ಕೂ ಆಧುನೀಕರಣಕ್ಕೂ ವ್ಯತ್ಯಾಸವಿದೆ. ಮಹಿಳೆಯರು ನೈಟ್ ಔಟ್ ಮಾಡುವುದು  ನಮ್ಮ ಸಂಸ್ಕೃತಿಗೆ ವಿರುದ್ಧವಾದುದು. ಮಹಿಳೆಯರು ಮಾತ್ರ ಅಲ್ಲ ಪುರುಷರು ಕೂಡಾ ನೈಟ್  ಔಟ್ ಮಾಡುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಸ್ವಾಮಿ ಹೇಳಿದ್ದಾರೆ.

ನಾವು ಮುಂಜಾನೆ 4 ಗಂಟೆ ಏಳಬೇಕೆಂದು ನನ್ನ ಸಂಸ್ಕೃತಿ ಹೇಳುತ್ತಿದೆ. ನೀವು ನೈಟ್ ಔಟ್  ಮಾಡಿದರೆ ನಿಮಗೆ ಮುಂಜಾನೆ 4 ಗಂಟೆಗೆ ಏಳಲು ಸಾಧ್ಯವೇ?

ಮಾಧ್ಯಮಗಳು ಶರ್ಮಾ ಅವರ ಹೇಳಿಕೆಯನ್ನು ತಿರುಚಿವೆ. ಶರ್ಮಾ ಸರಿಯಾಗಿಯೇ ಹೇಳಿದ್ದಾರೆ.

ಅಮೆರಿಕಾ ಮತ್ತು ಯುರೋಪ್ನಲ್ಲಿ ಪಾಶ್ಚಾತ್ಯೀಕರಣವಿದ್ದರೂ ಅಲ್ಲಿನ ಸಮಾಜ ಸಂತೋಷದಿಂದಿಲ್ಲ. ಅದರ ಬದಲಾಗಿ ಸಂತೋಷವನ್ನು ಕಂಡುಕೊಳ್ಳಲು ಅವರು ನಮ್ಮ ಸ್ವಾಮೀಜಿಗಳ ಆಶ್ರಮಕ್ಕೆ ಬರುತ್ತಿದ್ದಾರೆ.

ವಾರಾಂತ್ಯದಲ್ಲಿ ಅಬ್ಬರದ ಮೋಜು ಮಾಡುವ ಬದಲು ನಾವು ಸರಳವಾಗಿ ಜೀವನ ನಡೆಸಬೇಕು. ನಾವು ಆಧುನಿಕತೆಯನ್ನು ಒಪ್ಪಿಕೊಳ್ಳೋಣ ಆದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವುದು ಬೇಡ ಎಂದು ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಹೆಣ್ಮಕ್ಕಳು ನೈಟ್ ಔಟ್ ಮಾಡುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದುದು ಎಂದು ಶರ್ಮಾ ಹೇಳಿಕೆ ನೀಡಿದ್ದರು. ತದನಂತರ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಸ್ಪಷ್ಟನೆ ನೀಡಿದ್ದರು.

Write A Comment