ರಾಷ್ಟ್ರೀಯ

ಭೀಕರ ಅಪಘಾತದಲ್ಲಿ 9 ಕಬಡ್ಡಿ ಪಟುಗಳ ಸಾವು

Pinterest LinkedIn Tumblr

accid

ಭುವನೇಶ್ವರ್, ಸೆ. 20: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಕನಸು ಹೊತ್ತಿದ್ದ 9 ಮಂದಿ ಕಬಡ್ಡಿ ಆಟಗಾರರು ಸುಂದರಘರ್‌ನ ಬರಾಯ್ ಪ್ರದೇಶದಲ್ಲಿ ಇಂದು ಮುಂಜಾನೆ 4.30ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸು ನೀಗಿದ್ದಾರೆ.

ಕಬಡ್ಡಿ ಪಂದ್ಯವೊಂದರಲ್ಲಿ ಗೆದ್ದ ಸಂತಸದಲ್ಲಿ ಮಿನಿಟ್ರಕ್‌ವೊಂದರಲ್ಲಿ ಹಿಂದಿರುಗುತ್ತಿದ್ದಾಗ ಅದು ಕಮರಿಯೊಂದಕ್ಕೆ ಉರುಳಿ ಬಿದ್ದ ಪರಿಣಾಮವಾಗಿ 7 ಮಂದಿ ಸ್ಥಳದಲ್ಲೇ ಸತ್ತಿದ್ದು, ಇತರ ಇಬ್ಬರು ತೀವ್ರ ಗಾಯಗಳಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಅಸು ನೀಗಿದ್ದಾರೆ.

ಸೆಂಧಾಪುರದ 21 ಮಂದಿ ಧುಡಿಗಾಂವ್‌ನಿಂದ ಮಿನಿ ಟ್ರಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಸೇತುವೆಯೊಂದರ ಮೇಲೆ ಸಮತೋಲನ ತಪ್ಪಿದ ಟ್ರಕ್ ಸೇತುವೆಯಿಂದ ಕೆಳಕ್ಕುರುಳಿ ಈ ದುರಂತ ಸಂಭವಿಸಿದೆ.

ಮತ್ತೊಂದು ವರದಿಯ ಪ್ರಕಾರ ಮೂರು ಮಂದಿ ಸ್ಥಳದಲ್ಲೇ ಸತ್ತಿದ್ದು, ಇತರ 6 ಮಂದಿ ಆಸ್ಪತ್ರೆಯಲ್ಲಿ ಸತ್ತಿದ್ದಾರೆ.

ಸತ್ತ 9 ಮಂದಿ ಮಾತ್ರವಲ್ಲದೆ ತೀವ್ರವಾಗಿ ಗಾಯಗೊಂಡಿರುವ ಇತರ 8 ಮಂದಿ ಆಟಗಾರರನ್ನು ಯಾರ್ಕೆಲಾದ ಐಜಿಎಚ್ ಆಸ್ಪತ್ರೆಗೆ ಸೇರಿಸಲಾಗಿದೆ.

ಸತ್ತವರನ್ನು ಚಂದ್ರಶೇಖರ ಪ್ರಧಾನ್, ಧರಣೀದರ ನಾಯಕ್, ಅಭಿಮನ್ಯು ಕಾಲೊ, ಧರ್ಮೇಂದ್ರ ನಾಯಕ್, ಉಮೇಶ್ ಕಿಸಾನ್, ಗೌತಮ್ ನಾಯಕ್ ಮತ್ತು ಗುರುಚರಣ್ ಕಿಸಾನ್ ಎಂದು ಗುರುತಿಸಲಾಗಿದೆ.

ಸತ್ತವರ ಕುಟುಂಬಗಳಿಗೆ ಒಡಿಶಾ ಸರ್ಕಾರ ತಲಾ 1 ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಗಾಯಗೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿಯೂ ಪ್ರಕಟಿಸಿದೆ.

ಇತ್ತೀಚೆಗೆ ನಡೆದ ಪ್ರೊಕಬಡ್ಡಿ ಲೀಗ್ ಪಂದ್ಯಗಳು ಟಿವಿಯಲ್ಲಿ ಪ್ರಸಾರವಾದಾಗಿನಿಂದ ಕಬಡ್ಡಿ ಆಟದ ಜನಪ್ರಿಯತೆ ಯದ್ವಾತದ್ವಾ ಹೆಚ್ಚಿದ್ದು, ಯುವ ಉತ್ಸಾಹಿಗಳು ಕಬಡ್ಡಿ ಆಟದಲ್ಲಿ ಹೆಚ್ಚಾಗಿ ತೊ‌ಡಗಿಕೊಳ್ಳುತ್ತಿದ್ದಾರೆ.

ಹೆಚ್ಚು ವೆಚ್ಚವಿಲ್ಲದ, ದೈಹಿಕ ಶಕ್ತಿ ಮತ್ತು ಕೌಶಲ್ಯಮಾತ್ರವನ್ನೇ ಕೇಳುವ ಕಬಡ್ಡಿ ಆಟ ಜನರನ್ನು ಅದರಲ್ಲೂ ಗ್ರಾಮೀಣ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.

Write A Comment