ರಾಷ್ಟ್ರೀಯ

ಹಾರ್ದಿಕ್ ಪಟೇಲ್ ಬಂಧನ: ಗುಜರಾತ್‌ನಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

Pinterest LinkedIn Tumblr

Patelಸೂರತ್, ಸೆ.19: ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ‘ಏಕತಾ ಯಾತ್ರೆ’ ನಡೆಸಲು ಯತ್ನಿಸಿದ ಆರೋಪದಲ್ಲಿ ಪಟೇಲ್ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಹಾಗೂ 35 ಮಂದಿ ಬೆಂಬಲಿಗರನ್ನು ಶನಿವಾರ ಸೂರತ್‌ನ ವರಚ್ಛ ಪ್ರದೇಶದಿಂದ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಟೇಲ್ ಬಿಡುಗಡೆಯಾಗದಿದ್ದಲ್ಲಿ ೇಶಾದ್ಯಂತ ಜೈಲ್‌ಭರೋ ಆಂದೋಲನ ಆರಂಭಿಸಲಿದ್ದೇವೆ ಎಂದು ಪಾಟಿದಾರ್ ಸಂಘಟನೆ ಎಚ್ಚರಿಸಿದೆ.
ತಾವು ಹಾರ್ದಿಕ್ ಪಟೇಲ್ ಹಾಗೂ ಅವರ 35 ಮಂದಿ ಬೆಂಬಲಿಗರನ್ನು ಇಂದು ರ್ಯಾಲಿಗೆ ಮೊದಲು ನಗರದ ವರಚ್ಛ ಪ್ರದೇಶದ ಮಂಗಧ್ ಚೌಕ್‌ನಿಂದ ವಶಕ್ಕೆ ಪಡೆದಿದ್ದೇವೆಂದು ಸೂರತ್‌ನ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ತಿಳಿಸಿದರು.
ರ್ಯಾಲಿ ನಡೆಸಲು ರಾಜ್ಯದ ಅಧಿಕಾರಿಗಳ ಅನುಮತಿ ಪಡೆಯದ ಕಾರಣ, ಕಾನೂನು ಮತ್ತು ಸುವ್ಯವಸ್ಥೆಯ ಹಿತಾಸಕ್ತಿಯಿಂದ ಹಾರ್ದಿಕ್ ಹಾಗೂ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಅವರು ಹೇಳಿದರು.
ಬಂಧನದ ಬಳಿಕ ಹಾರ್ದಿಕ್ ಹಾಗೂ ಇತರರನ್ನು ಪೊಲೀಸ್ ಮುಖ್ಯಾಲಯಕ್ಕೆ ಕೊಂಡೊಯ್ಯಲಾಯಿತೆಂದು ಅಸ್ಥಾನಾ ತಿಳಿಸಿದರು.
ಹಾರ್ದಿಕ್ ಪಟೇಲ್ ಬಂಧನದ ನಂತರ ಶನಿವಾರ ಗುಜರಾತ್ ರಾಜ್ಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಯನ್ನು ರಾಜ್ಯ ಸರಕಾರವು ಅನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ವದಂತಿ ಹಬ್ಬಿಸುವುದನ್ನು ತಡೆಗಟ್ಟಲು ಅನಿರ್ದಿಷ್ಟ ಅವಧಿಯವರೆಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯದ ಡಿಜಿಪಿ ಪಿ.ಸಿ.ಥಾಕೂರ್ ಹೇಳಿದರು.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ನಿಷೇಧಿಸಲಾಗಿದೆ ಎಂದು ಅಹ್ಮದಾಬಾದ್ ನಗರ ಪೊಲೀಸ್ ಆಯುಕ್ತ ಶಿವಾನಂದ ಝಾ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಪೊಲೀಸರ ಕ್ರಮವನ್ನು ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ 22ರ ಹರೆಯದ ಹಾರ್ದಿಕ್, ಗುಜರಾತ್ ಸರಕಾರವು ತಮ್ಮ ಧ್ವನಿಯನ್ನು ಅದುಮಲು ಬಯಸಿದೆ. ಅದು ತಮಗೆ ಕಿರುಕುಳ ನೀಡ ಬಯಸಿದೆ. ಗುಜರಾತ್ ಸರಕಾರ ಹಾಗೂ ಪೊಲೀಸರು ರಾಜ್ಯದಲ್ಲಿ ಹಿಂಸಾಚಾರವನ್ನು ಬಯಸುತ್ತಿದ್ದಾರೆ. ಈ ಕ್ರಮವು ಪ್ರಜಾಪ್ರಭುತ್ವದ ಸ್ಫೂರ್ತಿಗೆ ವಿರುದ್ಧವಾದುದು ಎಂದರು.
ದಾಂಡಿಯಿಂದ ಅಹ್ಮದಾಬಾದ್‌ಗೆ ‘ಏಕತಾ ರ್ಯಾಲಿ’ ನಡೆಸಲು ಅನುಮತಿ ನಿರಾಕರಿಸಿದ ಬಳಿಕ, ಹಾರ್ದಿಕ್ ರ್ಯಾಲಿಯ ಯೋಜನೆಯನ್ನು ಶುಕ್ರವಾರದ ವರೆಗೆ ಗುಟ್ಟಾಗಿರಿಸಿದ್ದರು. ಶನಿವಾರ ಮುಂಜಾನೆ ಹಾರ್ದಿಕ್‌ರ ಸಹಚಾರಿ ಹಾಗಿ ಸೂರತ್‌ನಲ್ಲಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ(ಪಿಎಎಎಸ್) ಸಂಚಾಲಕ ಅಲ್ಪೇಶ್ ಕಥಿರಿಯಾ, ತಾವು ನಗರದ ವರಚ್ಛ ಪ್ರದೇಶದ ಮಂಗಧ್ ಚೌಕ್‌ನಿಂದ ರ್ಯಾಲಿಯನ್ನು ನಡೆಸಲಿದ್ದೇವೆಂದು ಘೋಷಿಸಿದ್ದರು.
ಬಿಹಾರದಲ್ಲಿ ಬಿಜೆಪಿಯ ‘ಆಟ ಕೆಡಿಸುವ’ ಬೆದರಿಕೆಯನ್ನು ಹಾರ್ದಿಕ್ ಹಾಕಿದ್ದಾರೆ. ಗುಜರಾತ್‌ನಲ್ಲಿ ಪಟೇಲರ ಪ್ರಖ್ಯಾತ ಮುಖವಾಗಿ ಮೂಡಿ ಬಂದಿರುವ ಅವರು, ಇತರ ಹಿಂದುಳಿದ ಸಮುದಾಯಗಳ (ಒಬಿಸಿ) ವರ್ಗದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಕಾನೂನು-ಸುವ್ಯವಸ್ಥೆಯ ವಿಶಾಲ ಹಿತಾಸಕ್ತಿಯಿಂದ ನಾಳೆ ರ್ಯಾಲಿ ನಡೆಸಲು ಹಾರ್ದಿಕ್ ಪಟೇಲರಿಗೆ ತಾವು ಅನುಮತಿ ನಿರಾಕರಿಸಿದ್ದೇವೆಂದು ನವಸಾರಿ ಜಿಲ್ಲಾಧಿಕಾರಿ ಆರ್.ಎಂ. ಮುತ್ತುದತ್ ತಿಳಿಸಿದರು.
ಕಳೆದ ಎರಡು ವಾರಗಳಲ್ಲಿ ಹಾರ್ದಿಕ್, ಹಿಮ್ಮುಖ ದಾಂಡಿ ಯಾತ್ರೆ ನಡೆಸುವ ಬಗ್ಗೆ ಎರಡು ಬಾರಿ ಘೋಷಿಸಿದ್ದರು. ಆದರೆ, ನವಸಾರಿ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದ ಕಾರಣ, ಅವರು ಈ ಯೋಜನೆಯನ್ನು ರದ್ದುಪಡಿಸಿದ್ದರು.
ಆ.25ರಂದು ನಡೆದಿದ್ದ ರ್ಯಾಲಿಯೊಂದರಲ್ಲಿ ತನ್ನ ಆಕ್ರಮಣಕಾರಿ ಭಾಷಣದಿಂದ ಹಾರ್ದಿಕ್ ದೇಶದ ಗಮನ ಸೆಳೆದಿದ್ದಾರೆ. ಅವರ ಬಂಧನದ ಬಳಿಕ ಗುಜರಾತ್‌ನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ 10 ಮಂದಿ ಸಾವನ್ನಪ್ಪಿದ್ದರು.

Write A Comment