ರಾಷ್ಟ್ರೀಯ

5 ದಶಕದಲ್ಲಿ ಸಾಧ್ಯವಾಗದ್ದನ್ನು 50 ತಿಂಗಳಲ್ಲಿ ಮಾಡಿದ್ದೇವೆ: ಮೋದಿ

Pinterest LinkedIn Tumblr

modiwebವಾರಾಣಸಿ (ಪಿಟಿಐ): ಕಾಂಗ್ರೆಸ್‌ನ ‘ಗರೀಭಿ ಹಠಾವೊ’ ಆಂದೋಲನದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಬಡವರ ಜೀವನದಲ್ಲಿ ಸಣ್ಣ ಬದಲಾವಣೆಯನ್ನೂ ಹಿಂದಿನ ಸರ್ಕಾರದಿಂದ ತರಲು ಆಗಿಲ್ಲ. 5 ದಶಕದ ಆಡಳಿತದಲ್ಲಿ ಬಡವರಿಗಾಗಿ ಒಂದು ಬ್ಯಾಂಕ್‌ ಖಾತೆಯನ್ನೂ ತೆರೆಯಲು ಆಗದವರು ಈಗ ಬಿಜೆಪಿ ಸರ್ಕಾರದ ‘ಜನ ಧನ ಯೋಜನೆ’ಯ ಟೀಕಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ ಮೋದಿ,  ‘ಕಾಂಗ್ರೆಸ್‌ನಿಂದ 50 ವರ್ಷಗಳಲ್ಲಿ ಸಾಧ್ಯವಾಗದ್ದನ್ನು ಬಿಜೆಪಿ 50 ತಿಂಗಳಲ್ಲಿ ಮಾಡಿ ತೋರಿಸಿದೆ’ ಎಂದರು.

ಹಿಂದಿನ ಸರ್ಕಾರಗಳ ಸಂದರ್ಭದಲ್ಲಿ ‘ಬಡತನ ನಿರ್ಮೂಲನೆ’ ಎನ್ನುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ  ಸಂಪ್ರದಾಯ ಎನ್ನುವಂತೆ ಚಾಲ್ತಿಗೆ ಬರುತ್ತಿತ್ತು.  ಕಳೆದ 40–50 ವರ್ಷಗಳಿಂದ ‘ಗರೀಭಿ ಹಠಾವೊ’ ಎಂಬ ಘೋಷ ವಾಕ್ಯ ಕೇಳುತ್ತಿದ್ದೇವೆ. ಆದರೆ, ಬಡತನ ಮಾತ್ರ ನಿರ್ಮೂಲನೆ ಆಗಿಲ್ಲ. ಆದರೆ, ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಬಡವರವನ್ನೂ ವಿತ್ತೀಯ ಸೇರ್ಪಡೆ ವ್ಯಾಪ್ತಿಗೆ ತರಲಾಗಿದೆ. ಅವರಿಗೆ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ ಎಂದರು.

ದೇಶದಲ್ಲಿ ಬ್ಯಾಂಕುಗಳು ರಾಷ್ಟ್ರೀಕರಣಗೊಂಡು ನಾಲ್ಕು ದಶಕಗಳು ಕಳೆದಿದ್ದರೂ, ಬಡವರಿಗಾಗಿ ಒಂದು ಬ್ಯಾಂಕ್‌ ಖಾತೆಯನ್ನು ಪ್ರಾರಂಭಿಸಲು ಹಿಂದಿನ ಸರ್ಕಾರದಿಂದ ಆಗಿರಲಿಲ್ಲ. ಜನ ಧನ ಯೋಜನೆಯ ಮೂಲಕ ಇದುವರೆಗೆ 18 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ಬಡವರು ಇದುವರೆಗೆ 30 ಸಾವಿರ ಕೋಟಿ ಠೇವಣಿ ಇರಿಸಿದ್ದಾರೆ ಎಂದು ಅವರು ಹೇಳಿದರು.

Write A Comment