ರಾಷ್ಟ್ರೀಯ

ಅಧಿಸೂಚನೆ, ಪಶ್ಚಿಮ ಘಟ್ಟದ ಮಂದಿ ನಿರಾಳ: 5 ಕೋಟಿ ಮಂದಿ ಮೇಲೆ ಪ್ರತಿಕೂಲ ಪರಿಣಾಮವಿಲ್ಲ

Pinterest LinkedIn Tumblr

Western-Ghatsನವದೆಹಲಿ: ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ವಲಯ(ಇಎಸ್‍ಜೆಡ್)ಗಳನ್ನು ಘೋಷಿಸುವ ಕುರಿತು ಕೇಂದ್ರ ಸರ್ಕಾರ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಹಳೆಯ  ಅಧಿಸೂಚನೆಯನ್ನು ಸೂಪರ್‍ಸೀಡ್ ಮಾಡಿರುವುದಾಗಿ ಘೋಷಿಸಿದೆ.

ಹೀಗಾಗಿ, ಕಸ್ತೂರಿರಂಗನ್ ವರದಿಯಿಂದ ಭೀತಿಗೊಳಗಾಗಿದ್ದ ಜನರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಸೆ.4ರಂದೇ ಹೊಸ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ 60 ದಿನಗಳೊಳಗಾಗಿ  ಆಕ್ಷೇಪಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ಪರಿಸರ ಸಚಿವಾಲಯ ಸೂಚಿಸಿದೆ. ಇದೇ ವೇಳೆ, ಕಳೆದ ವರ್ಷದ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದ್ದ ಪರಿಸರೀಯ ಸೂಕ್ಷ್ಮ ವಲಯಗಳ  ವ್ಯಾಪ್ತಿ ಮತ್ತು ಇತರೆ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.

5 ಕೋಟಿ ಮಂದಿ ನಿಟ್ಟುಸಿರು

ಕಳೆದ ವರ್ಷ ಮಾ. 10ರಂದು ಹೊರಡಿಸಲಾದ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸೂಪರ್‍ಸೀಡ್ ಮಾಡಲಾಗಿದ್ದು, ಹೊಸ ಅಧಿಸೂಚನೆಯಂತೆ ಪಶ್ಚಿಮ ಘಟ್ಟ  ಪ್ರದೇಶಗಳಲ್ಲಿ ವಾಸಿಸುತ್ತಿರುವ 5 ಕೋಟಿ ಮಂದಿಯ ಮೇಲೆ ಯಾವುದೇ ಪರಿಣಾಮ ಬೀರದು. ಕೃಷಿ, ತೋಟಗಾರಿಕೆ, ಅಲ್ಲಿನ ಜನರ ಇತರೆ ಚಟುವಟಿಕೆಗಳಿಗೂ ಧಕ್ಕೆಯಾಗದು ಎಂದು ಪರಿಸರ  ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಪಾವಿತ್ರ್ಯತೆ ಕಾಪಾಡಲು ಬದ್ಧ

ಇದೇ ವೇಳೆ, ಈ ವಲಯದ ಜೀವವೈವಿಧ್ಯತೆ ಮತ್ತು ಪಾವಿತ್ರ್ಯತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಅದರ ಜತೆಗೇ, ಅಲ್ಲಿರುವ ಜನರಸುಸ್ಥಿರ ಅಭಿವೃದ್ಧಿಯನ್ನೂ ನಾವು ಗಣನೆಗೆ  ತೆಗೆದುಕೊಂಡಿದ್ದೇವೆ ಎಂದಿದ್ದಾರೆ ಜಾವಡೇಕರ್. ಹಳೆಯ ಅಧಿಸೂಚನೆಯ ಅವಧಿ ಸೆ.5ರಂದು ಮುಗಿದಿದೆ. ಈ ವಲಯಗಳ ವ್ಯಾಪ್ತಿಗೆ ಬರುವ 6 ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು  ತಮಿಳುನಾಡು ಸರ್ಕಾರಗಳು ಇನ್ನೂ ಪರಿಶೀಲನಾ ವರದಿ ನೀಡಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಕಸ್ತೂರಿರಂಗನ್ ಶಿಫಾರಸು ಏನಾಗಿತ್ತು?

ಈ ಹಿಂದೆ ವರದಿ ನೀಡಿದ್ದ ಕಸ್ತೂರಿರಂಗನ್ ರಂಗನ್ ಸಮಿತಿಯು, ಪಶ್ಚಿಮಘಟ್ಟಗಳ ಶೇ.37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಬೇಕು ಹಾಗೂ ಅಲ್ಲಿ ಇತರೆ ಮಾನವ,  ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು ಎಂದು ಶಿಫಾರಸು ಮಾಡಿತ್ತು. ಆದರೆ, ಕಸ್ತೂರಿರಂಗನ್ ವರದಿಗೆ ಅನೇಕ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು, ವರದಿ ಜಾರಿಯಾದರೆ,  ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಯೋಜನೆ ಗಳು ಮತ್ತು ಅಲ್ಲಿ ವಾಸಿಸುವ ಜನರ ಬದುಕಿಗೆ ತೀವ್ರ ಹೊಡೆತ ಬೀಳಲಿದೆ ಎಂದು ಆರೋಪಿಸಿದ್ದವು. ಕರ್ನಾಟಕದ ಒಟ್ಟು 1,91,791 ಚದರ  ಕಿ.ಮೀ. ಭೂಪ್ರದೇಶದ ಪೈಕಿ 44,448 ಚ.ಕಿ.ಮೀ. ಪ್ರದೇಶವು ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿದೆ. ಇಲ್ಲಿನ ಪರಿಸರ ಸೂಕ್ಷ್ಮ ವಲಯದಲ್ಲಿ 1,576 ಗ್ರಾಮಗಳಿವೆ.

Write A Comment