ರಾಷ್ಟ್ರೀಯ

ತನ್ನ ಭೇಟಿಯಿಂದ ಚಂಡಿಗಡದ ಜನರಿಗಾದ ತೊಂದರೆಗಳಿಗೆ ಪ್ರಧಾನಿ ವಿಷಾದ

Pinterest LinkedIn Tumblr

modhiಚಂಡಿಗಡ,ಸೆ.11: ನಗರದ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಅಗಲಿದ ತಮ್ಮ ಪೀತಿಪಾತ್ರರ ಅಂತ್ಯಸಂಸ್ಕಾರವನ್ನು ನಡೆಸಲೂ ಕುಟುಂಬಗಳು ಪರದಾಡುವಂತಾಗಿತ್ತು. ಇವು ಶುಕ್ರವಾರ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ‘ಸೈಡ್ ಇಫೆಕ್ಟ್ ’ಗಳ ಕೆಲವು ಸ್ಯಾಂಪಲ್‌ಗಳು. ತನ್ನಿಂದಾಗಿ ಜನರಿಗುಂಟಾದ ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸಿರುವ ಮೋದಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿಯೋರ್ವರ ಭೇಟಿಯ ಸಂದರ್ಭ ಚಂಡಿಗಡ ಆಡಳಿತವು ಸರಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿತ್ತು. ಅಲ್ಲಲ್ಲಿ ಟ್ರಾಫಿಕ್ ಜಾಮ್‌ಗಳು,ವಿವಿಐಪಿ ಹಾದು ಹೋಗುವ ಮಾರ್ಗಗಳಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ನಿಷೇಧ,ವಾಹನಗಳ ಸಂಚಾರ ಮಾರ್ಗಗಳ ಬದಲಾವಣೆ ಇವೆಲ್ಲವೂ ಜನರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದ್ದವು.

ತನ್ನ ನಾಲ್ಕು ಗಂಟೆಗಳ ಭೇಟಿ ಅವಧಿಯಲ್ಲಿ ಮೋದಿಯವರು ನೂತನ ನಾಗರಿಕ ವಾಯುಯಾನ ಟರ್ಮಿನಲ್‌ನ ಉದ್ಘಾಟನೆ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 34ನೆ ಘಟಿಕೋತ್ಸವ ಸಮಾರಂಭದಲ್ಲಿ ಭಾಷಣ ಮತ್ತು ಬಹಿರಂಗ ಸಭೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕಳೆದ ವರ್ಷದ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಚಂಡಿಗಡಕ್ಕೆ ಮೋದಿಯವರ ಪ್ರಥಮ ಭೇಟಿಯಾಗಿತ್ತು.

ಚಂಡಿಗಡದ ಜನರಿಗೆ ನನ್ನ ಭೇಟಿ ಯಿಂದುಂಟಾದ ತೊಂದರೆ ಗಳಿಗೆ,ವಿಶೇಷವಾಗಿ ಶಾಲೆಗಳಿಗೆ ರಜೆ ನೀಡಿದ್ದರ ಬಗ್ಗೆ ನಾನು ವಿಷಾದಿಸುತ್ತೇನೆ. ಈ ತೊಂದರೆಗಳನ್ನು ಸಂಪೂರ್ಣ ವಾಗಿ ನಿವಾರಿಸಬಹುದಿತ್ತು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ವಿಚಾರಣೆಯನ್ನು ನಡೆಸಲಾಗುವುದು ಮತ್ತು ಚಂಡಿಗಡದ ಜನತೆಗೆ ಉಂಟಾದ ತೊಂದರೆಗಳಿಗೆ ಹೊಣೆಗಾರಿಕೆಯನ್ನು ನಿಗದಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಪ್ರಧಾನಿ,ರಾಷ್ಟ್ರಪತಿ ಅಥವಾ ಉಪ ರಾಷ್ಟ್ರಪತಿಗಳು ಭೇಟಿ ನೀಡಿದಾಗ ಶಾಲೆಗಳನ್ನು ಮುಚ್ಚುವಂತೆ ಎಂದೂ ಆದೇಶಿಸಿರಲಿಲ್ಲ.

ಶಾಲಾ ಸಮಯದಲ್ಲಿಯೇ ಮೋದಿಯವರ ಭೇಟಿ ನಿಗದಿಗೊಂಡಿದ್ದರಿಂದ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಶಾಲೆಗಳನ್ನು ಮುಚ್ಚಲು ನಿರ್ಧರಿಸಲಾಗಿತ್ತು ಎಂದು ಚಂಡಿಗಡ ಆಡಳಿತದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಮೋದಿಯವರ ಬಹಿರಂಗ ಸಭೆಯನ್ನು ಸೆಕ್ಟರ್ 25ರಲ್ಲಿರುವ ನಗರದ ಮುಖ್ಯ ರುದ್ರಭೂಮಿಯ ಬಳಿಯಲ್ಲಿಯೇ ಆಯೋಜಿಸಲಾಗಿತ್ತು. ರುದ್ರಭೂಮಿಯನ್ನು ತಾತ್ಕಾಲಿಕ ಪಾರ್ಕಿಂಗ್ ಸ್ಥಳವನ್ನಾಗಿ ಮಾಡಿದ್ದರಿಂದ ತಮ್ಮ ಮೃತ ಬಂಧುಗಳ ಅಂತ್ಯಸಂಸ್ಕಾರ ನಡೆಸಬೇಕಿದ್ದವರು ತೊಂದರೆಗಳನ್ನು ಅನುಭವಿಸುವಂತಾಗಿತ್ತು. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಬ್ರಿಗೇಡಿಯರ್(ನಿವೃತ್ತ) ದೇವಿಂದರ್ ಸಿಂಗ್ ಹೀಗೆ ತೊಂದರೆಗಳನ್ನು ಅನುಭವಿಸಿದವರಲ್ಲಿ ಒಬ್ಬರು. ಅವರ 24ರ ಹರೆಯದ ಪುತ್ರ ಗುರುವಾರ ಅಪಘಾತದಲ್ಲಿ ಮೃತಪಟ್ಟಿದ್ದ. ಮುಖ್ಯ ರುದ್ರಭೂಮಿ ದೊರೆಯದ್ದರಿಂದ ಅವರು ಪುತ್ರನ ಅಂತ್ಯಸಂಸ್ಕಾರವನ್ನು ಮೊಹಾಲಿಯಲ್ಲಿ ನಡೆಸುವಂತಾಯಿತು.

Write A Comment