ರಾಷ್ಟ್ರೀಯ

ಕಾಲ್‌ಡ್ರಾಪ್ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿ ಸೂಚನೆ

Pinterest LinkedIn Tumblr

Airtel-Reಹೊಸದಿಲ್ಲಿ, ಸೆ.10: ಬುಧವಾರದ ಕೇಂದ್ರ ಸಂಪುಟ ಸಭೆಯಲ್ಲಿ ‘ಕಾಲ್ ಡ್ರಾಪ್’ (ಕರೆ ಕಡಿತ) ಸಮಸ್ಯೆಯ ಕುರಿತಂತೆ ಸಣ್ಣದೊಂದು ಆಂತರಿಕ ಚರ್ಚೆ ನಡೆದಿದ್ದು, ಈ ಪರಿಸ್ಥಿತಿ ಸುಧಾರಿಸದೇ ಇದ್ದಲ್ಲಿ, ಟೆಲಿಕಾಂ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್‌ಗೆ ಸೂಚನೆ ನೀಡಿದ್ದಾರೆ.

ತರಂಗಗುಚ್ಛ ವ್ಯಾಪಾರ ಕುರಿತಾದ ನಿಯಮಾವಳಿಗಳಿಗೆ ಸಂಪುಟದ ಒಪ್ಪಿಗೆ ಕೋರಿ ಟೆಲಿಕಾಂ ಸಚಿವರು ಅದನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟಾಗ, ಸಚಿವರಾದ ಎಂ.ವೆಂಕಯ್ಯ ನಾಯ್ಡು ಮತ್ತು ಅರುಣ್ ಜೇಟ್ಲಿ ಈ ವಿಷಯದ ಮೇಲೆ ಚರ್ಚೆ ಆರಂಭಿಸಿದರು.

ಸರಕಾರಿ ಕಟ್ಟಡಗಳ ಮೇಲೆ ನೆಟ್‌ವರ್ಕ್ ಗೋಪುರಗಳ ನಿರ್ಮಾಣಕ್ಕೆ ಅವಕಾಶವಾಗುವಂತೆ ಸರಕಾರವು ಎಲ್ಲ ಬಗೆಯ ನೆರವು ನೀಡಬೇಕು. ಆದರೆ, ಟೆಲಿಕಾಂ ಕಂಪೆನಿಗಳು ಮೂಲಸೌಕರ್ಯ ಸುಧಾರಣೆಗೆ ಬಂಡವಾಳ ಹೂಡಿಕೆ ಮಾಡುತ್ತಿಲ್ಲ ಮತ್ತು ಈ ದಿಕ್ಕಿನಲ್ಲಿ ಸಾಕಷ್ಟು ಶ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಚಿವರಿಬ್ಬರೂ ಅಭಿಪ್ರಾಯಪಟ್ಟರು ಎಂದು ತಿಳಿದುಬಂದಿದೆ.
ಈ ಮಧ್ಯೆ, ಕಾಲ್ ಡ್ರಾಪ್ ಸಮಸ್ಯೆಗೆ ಸಂಬಂಧಿಸಿದ ಅಂಕಿಅಂಶಗಳೊಂದಿಗೆ ಟ್ರಾಯ್ ಮುಖ್ಯಸ್ಥ ಆರ್.ಎಸ್.ಶರ್ಮಾ ಟೆಲಿಕಾಂ ಕಂಪೆನಿಗಳ ಸಿಇಒಗಳ ಜೊತೆಗೆ ಸಭೆ ನಡೆಸಿದ್ದಾರೆ. ಪ್ರತಿ ಟೆಲಿಕಾಂ ವಲಯಗಳಲ್ಲಿ ಕಂಪೆನಿಗಳು ಹೊಂದಿರುವ ಗ್ರಾಹಕರ ಸಂಖ್ಯೆ ಹಾಗೂ ಈಗಿರುವ ಮೂಲಸೌಕರ್ಯದೊಂದಿಗೆ ಈ ಗ್ರಾಹಕರಿಗೆ ದಕ್ಷತೆಯಿಂದ ಸೇವೆ ಒದಗಿಸಲು ಸಾಧ್ಯವೇ ಎಂಬುದನ್ನು ತಿಳಿಸುವಂತೆ ಅವರು ಈ ಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ.

ಧ್ವನಿ ವ್ಯವಹಾರವನ್ನು ಉಪೇಕ್ಷೆ ಮಾಡುತ್ತಿವೆ
ಕಳೆದ ಆರು ತಿಂಗಳ ಅವಧಿಯಲ್ಲಿ ಮಾಹಿತಿ ಸಾಗಣೆ (ಇ-ಮೇಲ್, ಫೋಟೊ-ವಿಡಿಯೊ ವರ್ಗಾವಣೆ ಇತ್ಯಾದಿ) ವ್ಯವಹಾರದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪೆನಿಗಳು ಧ್ವನಿ (ಮೊಬೈಲ್‌ನಲ್ಲಿ ಸಂಭಾಷಣೆ) ವ್ಯವಹಾರವನ್ನು ಉಪೇಕ್ಷೆ ಮಾಡುತ್ತಿವೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಈ ಸಮಸ್ಯೆಯ ಸುಳಿವು ನೀಡಿದ್ದಾರೆ. ಧ್ವನಿಯ ಬದಲು ಮಾಹಿತಿ ಸಾಗಣೆಯ ವ್ಯವಹಾರವನ್ನು ಉತ್ತೇಜಿಸಲಾಗುತ್ತಿದೆ. ಹೀಗಾಗಿ ಗುಣಮಟ್ಟದ ಸೇವೆಯನ್ನು ಒದಗಿಸುವ ವಿಚಾರದಲ್ಲಿ ಉತ್ತರದಾಯಿತ್ವವೇ ಇಲ್ಲದಂತಾಗಿದೆ ಎಂದು ಈ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಟವರ್‌ಗೆ ಅವಕಾಶ ದೊರೆತಲ್ಲಿ ಸಮಸ್ಯೆ ಪರಿಹಾರ: ಏರ್‌ಟೆಲ್
‘‘ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಸಂಸ್ಥೆ ನಮ್ಮದಾಗಿದ್ದು, ಅವರ ದೂರುಗಳಿಗೆ ಸ್ಪಂದಿಸಲು ನಾವು ಸದಾ ಸಿದ್ಧರಿದ್ದೇವೆ. ಕಾಲ್ ಡ್ರಾಪ್ ಸಮಸ್ಯೆಗೆ ಮುಖ್ಯ ಕಾರಣ ಟವರ್‌ಗಳ ಅಭಾವ. ಕರ್ನಾಟಕದಲ್ಲಿ ಖಾಸಗಿ ಕಟ್ಟಡಗಳಲ್ಲಿ ರೇಡಿಯೇಶನ್‌ನಿಂದ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಟವರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಏರ್‌ಟೆಲ್‌ನ ಕಾರ್ಪೊರೇಟರ್ ಕಮ್ಯುನಿಕೇಶನ್ ವಿಭಾಗದ ಕರ್ನಾಟಕ ಮುಖ್ಯಸ್ಥ ಶರತ್ ತೇಜಸ್ವಿ  ಪ್ರತಿಕ್ರಿಯೆ ನೀಡಿದ್ದಾರೆ.

‘ಟ್ರಾಯ್’ಗೆ ದೂರು ಕೊಡಿ
ಮೊಬೈಲ್ ಬಳಕೆದಾರರು ಕಾಲ್‌ಡ್ರಾಪ್, ಹಣ ಕಡಿತ ಸಹಿತ ಎದುರಿಸುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಯಾರಲ್ಲಿ ಹೋಗಬೇಕು ಎಂಬುದರ ಕುರಿತು ಮಾಹಿತಿ ಹೆಚ್ಚಿನವರಲ್ಲಿ ಇಲ್ಲ. ಕಾಲ್ ಸೆಂಟರ್‌ಗೆ ದೂರು ಕೊಟ್ಟು ಸುಮ್ಮನಾಗುವವರೇ ಹೆಚ್ಚು. ತಮ್ಮ ಮೊಬೈಲ್ ಸೇವಾದಾರರ ಬಗ್ಗೆ ತೀವ್ರ ಸಿಟ್ಟಾದವರು ಪೊಲೀಸ್ ಠಾಣೆಯ ಮೆಟ್ಟಲೇರಿದ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಅದು ಸಮಸ್ಯೆ ಪರಿಹಾರಕ್ಕೆ ಸೂಕ್ತ ದಾರಿ ಅಲ್ಲ. ಮೊಬೈಲ್ ಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಗ್ರಾಹಕ ಸೇವೆಗಳ ಮೇಲೆ ನಿಗಾ ಇಡಲೆಂದೇ ಇರುವ ಸಂಸ್ಥೆ ಟಿಆರ್‌ಎಐ ಅಥವಾ ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ). ಮೊಬೈಲ್ ಬಳಕೆದಾರರ ಹಿತಾಸಕ್ತಿಯನ್ನು ಕಾಪಾಡುವುದು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ.

ಹೇಗೆ ದೂರು ಕೊಡುವುದು?
ಟ್ರಾಯ್ ದೂರು ನೀಡಲು ನಿಯಮಿತ ಸೂತ್ರವೇನೂ ಇಲ್ಲ. ಗ್ರಾಹಕರು ತಮ್ಮ ದೂರನ್ನು ಟ್ರಾಯ್‌ಗೆ ಈಮೇಲ್ ಮೂಲಕ ಕಳುಹಿಸುವುದು ಉತ್ತಮ. ಟ್ರಾಯ್ ಭಾರತ ಸರಕಾರದ ಅಧೀನ ಸಂಸ್ಥೆಯಾಗಿರುವ ಕಾರಣ ದೂರನ್ನು ಇಂಗ್ಲಿಷ್‌ನಲ್ಲಿ ನಮೂದಿಸಿ ಈಮೇಲ್ ಮೂಲಕ ಅಥವಾ ರಿಜಿಸ್ಟರ್ಡ್ ಪೋಸ್ಟ್ ಮೂಲಕವೂ ಕಳುಹಿಸಬಹುದು. ಟ್ರಾಯ್ ಗ್ರಾಹಕರ ದೂರನ್ನು ಸಂಬಂಧಪಟ್ಟ ಕಂಪೆನಿ (ನೀವು ಏರ್‌ಟೆಲ್ ಬಗ್ಗೆ ದೂರು ಸಲ್ಲಿಸಿದ್ದರೆ ಆ ಸಂಸ್ಥೆಗೆ)ಗೆ ದೂರನ್ನು ರವಾನಿಸಿ ಪ್ರಶ್ನಿಸುವ ಅಧಿಕಾರವನ್ನು ಹೊಂದಿರುತ್ತದೆ. ವಿಳಾಸ ಈ ಕೆಳಗಿನಂತಿದೆ.
THE TELECOM REGULATORY AUTHORITY OF INDIA
Mahanagar Doorsanchar Bhawan (next to Zakir Hussain College)
Jawaharlal Nehru Marg (Old Minto Road) New Delhi: 110 002
Phone no : 91-11-2323 6308 (Reception)
FAX No. : 91-11-2321 3294(Reception)
Email : ap(at)trai(dot)gov(dot)in

ಸರಕಾರಿ ಕಚೇರಿಗಳಲ್ಲಿ ಟವರ್‌ಗೆ ಅವಕಾಶ ದೊರೆತಲ್ಲಿ ಸಮಸ್ಯೆ ಪರಿಹಾರ: ಏರ್‌ಟೆಲ್
‘‘ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಸಂಸ್ಥೆ ನಮ್ಮದಾಗಿದ್ದು, ಅವರ ದೂರುಗಳಿಗೆ ಸ್ಪಂದಿಸಲು ನಾವು ಸದಾ ಸಿದ್ಧರಿದ್ದೇವೆ. ಕಾಲ್ ಡ್ರಾಪ್ ಸಮಸ್ಯೆಗೆ ಮುಖ್ಯ ಕಾರಣ ಟವರ್‌ಗಳ ಅಭಾವ. ಕರ್ನಾಟಕದಲ್ಲಿ ಖಾಸಗಿ ಕಟ್ಟಡಗಳಲ್ಲಿ ರೇಡಿಯೇಶನ್‌ನಿಂದ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಟವರ್ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಏರ್‌ಟೆಲ್‌ನ ಕಾರ್ಪೊರೇಟರ್ ಕಮ್ಯುನಿಕೇಶನ್ ವಿಭಾಗದ ಕರ್ನಾಟಕ ಮುಖ್ಯಸ್ಥ ಶರತ್ ತೇಜಸ್ವಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಜೊತೆ ವೊಡಾ ಫೋನ್ ಮತ್ತು ಐಡಿಯಾದವರು ಟವರ್ ಹಂಚಿಕೆ ಮಾಡುತ್ತಿರುವುದರಿಂದ ಕೆಲವೊಂದು ಕಡೆ ಕಾಲ್‌ಡ್ರಾಪ್ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಟ್ರಾಯ್ ಹಾಗೂ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡುವಂತೆ ರಾಜ್ಯ ಸರಕಾರವನ್ನು ಕೋರಲಾಗಿದೆ. ಗುಜರಾತ್ ಹಾಗೂ ಮಹಾರಾಷ್ಟ್ರ ಸರಕಾರಗಳು ಈ ಬಗ್ಗೆ ಈಗಾಗಲೇ ಸಹಕಾರ ನೀಡಿವೆ. ಕರ್ನಾಟಕ ಸರಕಾರದಿಂದಲೂ ಸಹಕಾರ ಸಿಕ್ಕಲ್ಲಿ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ ’’ ಎಂದು ಶರತ್ ತೇಜಸ್ವಿ ಪ್ರತಿಕ್ರಿಯೆ ನೀಡಿದ್ದಾರೆ.

Write A Comment