ಸೂರತ್: ಮೀಸಲಾತಿ ವಿರುದ್ಧದ ಜನಾಭಿಪ್ರಾಯ ಸೃಷ್ಟಿಗಾಗಿ ಮೀಸಲಾತಿಯನ್ನೇ ಅಸ್ತ್ರವಾಗಿರಿಸಿಕೊಂಡಿರುವ ಗುಜರಾತ್ ನ ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್, ತನ್ನ “ಉಲ್ಟಾ ದಂಡಿಯಾತ್ರೆ” ಯನ್ನು ಮುಂದೂಡಿದ್ದಾರೆ. ಈ ದಂಡಿ ಯಾತ್ರೆಗೆ ಗುಜರಾತ್ ಸರ್ಕಾರ ಅನುಮತಿ ನೀಡದಿರುವ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ತನ್ನ ಈ ಕಾರ್ಯಕ್ರಮವನ್ನು ಸೆ. 13ಕ್ಕೆ ಮುಂದೂಡಿದ್ದಾರೆ.
“ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಸಲು ಉದ್ದೇಶಿಸಿದ್ದ ನಮ್ಮ ದಂಡಿಯಾತ್ರೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ.ಭಯಗೊಂಡಿರುವ ಸರಕಾರ ನಮಗೆ ಅನುಮತಿ ನೀಡಿಲ್ಲವಾದ ಕಾರಣ, ನಾವು ನಮ್ಮ ದಂಡಿ ಯಾತ್ರೆಯನ್ನು ಸೆಪ್ಟಂಬರ್ 13ಕ್ಕೆ ಮುಂದೂಡಿದ್ದೇವೆ. ಆದರೆ ಇದು ಅವರ ಸೋಲು ಮತ್ತು ನಮ್ಮ ಗೆಲುವು ಎಂಬುದಾಗಿ ನಾವು ಭಾವಿಸುತ್ತೇವೆ”.
ಏತನ್ಮಧ್ಯೆ, ಮುಂದಿನ ರವಿವಾರದ ಒಳಗೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲವಾದರೆ, ತಾನು ತನ್ನ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಪಟೇಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಂಡಿ ಮೆರವಣಿಗೆಯನ್ನು ನಡೆಸಲು ನವ್ಸಾರಿ ಜಿಲ್ಲಾಧಿಕಾರಿ ರಮ್ಯ ಮೋಹನ್ ಮುತಾದತ್ ಅನುಮತಿ ನಿರಾಕರಿಸಿದ್ದರು. ಪರಿಸ್ಥಿತಿ ನಿಭಾಯಿಸಲು ಪ್ರದೇಶದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದರು. ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹಾಗು ಅರೆಸೇನಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
“ಇಲ್ಲಿಯವರೆಗೆ ನಾವು ಎಲ್ಲಾ ಕಾನೂನುಗಳನ್ನು ಪಾಲಿಸಿದ್ದೇವೆ. ಆದರೆ ಅವರು ಮತ್ತೊಮ್ಮೆ ಅನುಮತಿ ನಿರಾಕರಿಸಿದರೆ, ನಾವು ಕಾನೂನನ್ನು ಪಾಲಿಸುವುದಿಲ್ಲ. ಅವರು ಅನುಮತಿ ನೀಡಲಿ, ನೀಡದೇ ಇರಲಿ ಸೆ. 13ರಂದು ದಂಡಿ ಯಾತ್ರೆ ನಿಗದಿತ ದಿನ ನಾವು ದಂಡಿಯಾತ್ರೆ ನಡೆಸಿಯೇ ತೀರುವೆವು” ಎಂದು ಪಟೇಲ್ ಹೇಳಿದ್ದಾರೆ.
ಅದೇ ವೇಳೆ ರಾಜ್ಯ ಸರ್ಕಾರ ಗುಜರಾತ್ ನಲ್ಲಿ ಸಮುದಾಯಗಳನ್ನು ವಿಭಜಿಸುತ್ತಿದೆ ಎಂದು ಪಟೇಲ್ ಆರೋಪಿಸಿದ್ದಾರೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬುದನ್ನು ಆಗ್ರಹಿಸಿ ನಾವು ಈ ಚಳುವಳಿಯನ್ನು ಮಾಡುತ್ತಿದ್ದೇವೆಯೇ ಹೊರತು ಸಮುದಾಯಗಳ ವಿರುದ್ಧ ಅಲ್ಲ ಎಂದು ಹಾರ್ದಿಕ್ ಸ್ಪಷ್ಟ ಪಡಿಸಿದ್ದಾರೆ.