ರಾಷ್ಟ್ರೀಯ

ಪಾಕ್ ನಮ್ಮ ಸಹೋದರನಿದ್ದಂತೆ: ಆರೆಸ್ಸೆಸ್

Pinterest LinkedIn Tumblr

Kundapura RSS news (19)ಹೊಸದಿಲ್ಲಿ, ಸೆ.5: ಪಾಕಿಸ್ತಾನ ಮತ್ತು ನಮ್ಮ ಇತರ ನೆರೆಯ ರಾಷ್ಟ್ರಗಳು ಒಂದೇ ದೇಹದಿಂದ (ಭಾರತ) ರೂಪುಗೊಂಡವುಗಳಾಗಿದ್ದು, ಈ ದೇಶಗಳೊಂದಿಗೆ ಸಂಬಂಧ ಸುಧಾರಣೆಗೆ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೆಸ್ಸೆಸ್ ಕಿವಿಮಾತು ಹೇಳಿದೆ.

ಅಲ್ಲದೆ, ಕಳೆದ 14 ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಹಾದಿ, ಉದ್ದೇಶ ಮತ್ತು ಬದ್ಧತೆಯನ್ನು ಕೇಸರಿ ಸಂಘಟನೆ ಅನುಮೋದಿಸಿದೆ.

ಭಾರತದ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಭೌಗೋಳಿಕವಾಗಿ ಹಾಗೂ ಐತಿಹಾಸಿಕವಾಗಿ ಸಂಬಂಧ ಹೊಂದಿರುವ ಈ ದೇಶಗಳೊಂದಿಗೆ ಸಂಬಂಧಗಳ ಸುಧಾರಣೆಗೆ ಏನೇನು ಕ್ರಮಕೈಗೊಳ್ಳಬೇಕೆಂಬುದರ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಆರೆಸ್ಸೆಸ್ ಹೇಳಿದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ವೈರತ್ವದ ಸಾಧ್ಯತೆಗಳನ್ನು ಆರೆಸ್ಸೆಸ್ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಳ್ಳಿ ಹಾಕಿದ್ದಾರೆ. ‘ಕುಟುಂಬವೊಂದರಲ್ಲಿ… ಸಹೋದರರ ನಡುವೆ… ಇಂತಹ ಘಟನೆಗಳು ಸಹಜ’ ಎಂದಿದ್ದಾರೆ. ನಾವು ಮುಂದೆ ಸಾಗಬೇಕು ಮತ್ತು ನಮ್ಮ ನಡುವಿನ ಸಂಬಂಧಗಳ ಸುಧಾರಣೆಗೆ ಕೆಲಸ ಮಾಡಬೇಕು ಎಂದು ದಿಲ್ಲಿಯಲ್ಲಿ ನಡೆದ ಮೂರು ದಿನಗಳ ಆರೆಸ್ಸೆಸ್- ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡುತ್ತ ಅವರು ಹೇಳಿದ್ದಾರೆ.

‘ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರು ಸಹೋದರರು. ಧರ್ಮ ಸಂಸ್ಥಾಪನೆಗೆ (ಶಾಂತಿ-ಸುವ್ಯವಸ್ಥೆಗೆ) ಪ್ರಯತ್ನಗಳನ್ನು ಮಾಡಬೇಕು’ ಎಂದು ಅವರು ನುಡಿದರು.

ದೇಶದಲ್ಲಿ ಬದಲಾಗುತ್ತಿರುವ ಧರ್ಮಾಧಾರಿತ ಜನಸಂಖ್ಯಾ ಬೆಳವಣಿಗೆಯ ಕುರಿತು ಸಮಾವೇಶದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಧರ್ಮಾಧಾರಿತ ಗಣತಿಯ ಮೇಲೆ ವರದಿಯೊಂದನ್ನು ಸಿದ್ಧಪಡಿಸಲು ಸಮಿತಿ ರಚನೆ ಮಾಡುವ ನಿರ್ಧಾರವನ್ನು ಸಮಾವೇಶದಲ್ಲಿ ಪ್ರಕಟಿಸಲಾಗಿದೆ. ರಾಂಚಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಆರೆಸ್ಸೆಸ್‌ನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

ಸಂಘದಿಂದ ತಾನು ಕಲಿತಿರುವ ಸಂಸ್ಕಾರ ಇಲ್ಲವೇ ನೈತಿಕತೆಯಿಂದಾಗಿ ತಾವು ಇಂದು ಏರಿರುವ ಮಟ್ಟವನ್ನು ತಲುಪುವಂತಾಯಿತು ಎಂದು ಸಮಾವೇಶದ ಅಂತಿಮ ದಿನದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧುರೀಣರ ಮುಂದೆ ಹೇಳಿಕೊಂಡರು. ಕೇಂದ್ರ ಸರಕಾರವು ಬಹಳಷ್ಟು ಕೆಲಸಗಳನ್ನು ಮಾಡಿದೆ. ಸರಕಾರದ ಸಾಧನೆಗಳನ್ನು ದೇಶಾದ್ಯಂತ ಪ್ರಚುರಪಡಿಸುವಂತೆ ಅವರು ಸಂಘಪರಿವಾರವನ್ನು ಮನವಿ ಮಾಡಿಕೊಂಡರು.

ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಇವೆ. ದೇಶದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಪ್ರಯತ್ನಗಳಿಗೆ ಅಂತಿಮ ಫಲಿಶಾಂಶ ಲಭಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Write A Comment