ರಾಷ್ಟ್ರೀಯ

ಕಲಬುರ್ಗಿ ಹತ್ಯೆ ಖಂಡಿಸಿ ಹಿಂದಿ ಲೇಖಕನಿಂದಸಾಹಿತ್ಯ ಅಕಾಡಮಿ ಪ್ರಶಸ್ತಿ ವಾಪಸ್

Pinterest LinkedIn Tumblr

uday-praksshಹೊಸದಿಲ್ಲಿ,ಸೆ.5: ಖ್ಯಾತ ಕನ್ನಡ ವಿದ್ವಾಂಸ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ ತನ್ನ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ವಾಪಸ್ ಮಾಡಲು ಖ್ಯಾತ ಹಿಂದಿ ಸಾಹಿತಿ ಉದಯ ಪ್ರಕಾಶ್ ನಿರ್ಧರಿಸಿದ್ದಾರೆ. ಇಲ್ಲಿಯ ಜವಾಹರಲಾಲ್ ವಿ.ವಿ.ಯ ಮಾಜಿ ಸಹಾಯಕ ಪ್ರೊಫೆಸರ್ ಆಗಿರುವ ಪ್ರಕಾಶ್ ಶುಕ್ರವಾರ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಸಕ್ತ ಛತ್ತೀಸ್‌ಗಡದ ಗ್ರಾಮವೊಂದರಲ್ಲಿರುವ ಪ್ರಕಾಶ್ ಮುಂದಿನ ವಾರ ರಾಜಧಾನಿಗೆ ಮರಳಿದ ನಂತರ ತನ್ನ ನಿರ್ಧಾರವನ್ನು ಅಕಾಡಮಿಗೆ ಅಧಿಕೃತವಾಗಿ ತಿಳಿಸುವ ಜೊತೆಗೆ,ಬಹುಮಾನದ ಹಣ ಒಂದು ಲಕ್ಷ ರೂ. ಮತ್ತು ಪ್ರಶಸ್ತಿ ಪತ್ರವನ್ನು ವಾಪಸ್ ಮಾಡಲಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಕಾಶ್,ತನ್ನ ಹೆಜ್ಜೆಯ ಕುರಿತು ತಾನು ಇತರ ಲೇಖಕರೊಂದಿಗೆ ಚರ್ಚಿಸಿಲ್ಲ.

ಇದು ಕೇವಲ ತನ್ನೊಬ್ಬನ ನಿರ್ಧಾರವಾಗಿದೆ ಎಂದು ತಿಳಿಸಿದರಾದರೂ, ತನ್ನ ಫೇಸ್‌ಬುಕ್ ಪೋಸ್ಟಿಂಗ್‌ನಲ್ಲಿ ತನ್ನ ಈ ನಿರ್ಧಾರವನ್ನು ತನ್ನ ಸ್ನೇಹಿತರು ಬೆಂಬಲಿಸುತ್ತಾರೆ ಮತ್ತು ಎಂದಿನಂತೆ ತನ್ನ ಜೊತೆಗಿರಲಿದ್ದಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಲೇಖಕರು,ಕಲಾವಿದರು,ಚಿಂತಕರು ಮತ್ತು ಬುದ್ಧಿಜೀವಿಗಳ ಬಗ್ಗೆ ಅಗೌರವ ಮತ್ತು ಅವರ ಮೇಲೆ ನಡೆದಿರುವ ಸರಣಿ ದಾಳಿಗಳ ಅಂಗವಾಗಿ ಕಲಬುರ್ಗಿಯವರ ಹತ್ಯೆ ನಡೆದಿದೆ ಎಂದೂ ಪ್ರಕಾಶ್ ಬರೆದಿದ್ದಾರೆ. ಅವರು ತನ್ನ ಹೇಳಿಕೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಕೊಲೆಯಾಗಿರುವ ಇನ್ನಿಬ್ಬರು ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆಯವರ ಬಗ್ಗೆ ಉಲ್ಲೇಖಿಸಿಲ್ಲವಾದರೂ, ಕಲಬುರ್ಗಿಯವರ ಹತ್ಯೆಗೆ ‘ಹಿಂದುತ್ವ ಶಕ್ತಿಗಳು’ ಕಾರಣವೆಂದು ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆಯ ಈ ಹೇಡಿ ಕೃತ್ಯ ನನ್ನನ್ನು ನಡುಗಿಸಿದೆ. ಇದು ನಮ್ಮನ್ನು ರಕ್ಷಿಸಿಕೊಳ್ಳಲು ವೌನವಾಗಿರುವ ಸಮಯವಲ್ಲ. ವೌನವು ಇಂತಹ ಶಕ್ತಿಗಳನ್ನು ಇನ್ನಷ್ಟು ಹುರಿದುಂಬಿಸುತ್ತದೆ ಎಂದು ಪ್ರಕಾಶ್ ಬರೆದಿದ್ದಾರೆ.

ಸಣ್ಣಕಥೆಗಳ ಸಂಕಲನ ‘ಮೋಹನದಾಸ್ ’ಗಾಗಿ 2010-11ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರಿಗೆ ಒಲಿದು ಬಂದಿತ್ತು. ಡಾ.ಕಲಬುರ್ಗಿ ಅವರೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

Write A Comment