ರಾಷ್ಟ್ರೀಯ

ಸಾಯುವ ಮುನ್ನ 10 ಮಂದಿ ಉಗ್ರ ರ ಬಲಿ ಪಡೆದ ಯೋಧ

Pinterest LinkedIn Tumblr

Armyಶ್ರೀನಗರ, ಸೆ.5: ಭಾರತೀಯ ಭೂ ಸೇನೆಯ ವಿಶೇಷ ಬಲ ಕಮಾಂಡೊ, ಲ್ಯಾನ್ಸ್ ನಾಯ್ಕ್ ಮೋಹನನಾಥ ಗೋಸ್ವಾಮಿ ಗುರುವಾರ ಹಂದ್ವಾರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಹುತಾತ್ಮರಾಗಿದ್ದಾರೆ. ಈ ಬಲಿದಾನಕ್ಕೆ ಮೊದಲು 11 ದಿನಗಳ ಕಿರು ಅವಧಿಯಲ್ಲಿ ಕಾಶ್ಮೀರದಲ್ಲಿ ಅವರು 10 ಮಂದಿ ಉಗ್ರರನ್ನು ಕೊಂದಿದ್ದಾರೆ ಎನ್ನಲಾಗಿದೆ.
ಕಳೆದ 11 ದಿನಗಳಿಂದ ಅವರು ಕಾಶ್ಮೀರ ಕಣಿವೆಯಲ್ಲಿ ಮೂರು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಕಾರ್ಯಾಚರಣೆಗಳಲ್ಲಿ 10 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು ಹಾಗೂ ಒಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತೆಂದು ಉಧಂಪುರ ಮೂಲದ ರಕ್ಷಣಾ ವಕ್ತಾರ ಕರ್ನಲ್ ಎಸ್.ಡಿ.ಗೋಸ್ವಾಮಿ ತಿಳಿಸಿದರು.
ಲ್ಯಾನ್ಸ್ ನಾಯ್ಕ್ ಗೋಸ್ವಾಮಿ 2002ರಲ್ಲಿ ಸೇನೆಯ ಪ್ರಧಾನ ಪ್ಯಾರಾ ಕಮಾಂಡೊ ಪಡೆಗೆ ಸ್ವಯಂಪ್ರೇರಿತವಾಗಿ ಸೇರಿದ್ದರು. ಅವರು, ತನ್ನ ಘಟಕದ ಅತ್ಯಂತ ಕಠಿಣ ಸೈನಿಕರಲ್ಲೊಬ್ಬನೆಂದು ಖ್ಯಾತಿ ಪಡೆದಿದ್ದರು. ‘ವಿಶ್ವದಲ್ಲೇ ಅತ್ಯುತ್ತಮರಲ್ಲೊಬ್ಬನೆಂದು ಸಂಘಟನೆ ಯೊಂದರಲ್ಲಿ ಹೆಗ್ಗಳಿಕೆ ಪಡೆಯುವುದು ಸಣ್ಣ ಗೌರವವೇನಲ್ಲ’ ಎಂದು ಅವರು ಹೇಳಿದರು.

ಪಾಕಿಸ್ತಾನದ ಮುಝಫ್ಫರ್‌ಗಡದ ನಿವಾಸಿ ಸಜ್ಜಾದ್ ಅಹ್ಮದ್ ಅಲಿಯಾಸ್ ಅಬು ಉಬೈದುಲ್ಲಾ ಎಂಬ ಉಗ್ರನನ್ನು ಇದೇ ಕಾರ್ಯಾಚರಣೆಯಲ್ಲಿ ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಭಯೋತ್ಪಾದಕನೊಬ್ಬನ ಬಂಧನ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವಲ್ಲಿ ಪಾಕಿಸ್ತಾನದ ಶಾಮೀಲಾತಿಯನ್ನು ಸಾಬೀತುಪಡಿಸುವುದಕ್ಕೆ ಖಚಿತ ಪುರಾವೆಯನ್ನೊದಗಿಸಿತು ಎಂದವರು ಹೇಳಿದರು.
ಲ್ಯಾನ್ಸ್ ನಾಯ್ಕ್ ಗೋಸ್ವಾಮಿ ಪುನಃ ಕುಪ್ವಾರದ ಸಮೀಪ ಹಫ್ರುದಾ ಅರಣ್ಯದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತವಾಗಿ ಸೇರಿಕೊಂಡಿದ್ದರು. ಇದು ಅವರ ಕೊನೆಯ ಕಾರ್ಯಾಚರಣೆಯಾಗಿತ್ತು. ಆದರೆ, ಹುತಾತ್ಮರಾಗುವ ಮೊದಲು ಅವರು ಭಾರೀ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರನ್ನು ಬಲಿಪಡೆದಿದ್ದರು. ಕಾರ್ಯಾಚರಣೆಯ ವೇಳೆಯೇ ಗೋಸ್ವಾಮಿ ಕೊನೆಯುಸಿರೆಳೆದಿದ್ದರು.
ಅವರ ಪಾರ್ಥಿವ ಶರೀರವನ್ನು ಐಎಎಫ್‌ನ ವಿಮಾನದಲ್ಲಿ ಹುಟ್ಟೂರು ಬರೇಲಿಗೆ ತರಲಾಯಿತು. ಅದನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ಪಂತ ನಗರಕ್ಕೆ ಒಯ್ದು ಸಂಪೂರ್ಣ ಸೇನಾ ಗೌರವದೊಂದಿಗೆ ಅಂತ್ಯಸಂಸ್ಕಾರ ಡೆಸಲಾಗುವುದು ಎಂದು ವಕ್ತಾರ ವಿವರಿಸಿದರು.
ಲ್ಯಾನ್ಸ್ ನಾಯ್ಕ್ ಗೋಸ್ವಾಮಿ ನೈನಿತಾಲ್‌ನ ಹಲ್ವಾನಿಯ ಇಂದಿರಾ ನಗರ ಗ್ರಾಮದ ನಿವಾಸಿಯಾಗಿದ್ದರು. ಅವರು, ಪತ್ನಿ ಮತ್ತು 7ರ ಹರೆಯದ ಪುತ್ರಿಯನ್ನು ಅಗಲಿದ್ದಾರೆ.
ಲ್ಯಾನ್ಸ್ ನಾಯ್ಕ್ ಗೋಸ್ವಾಮಿ ತನ್ನ ಘಟಕ ಕೈಗೊಂಡಿದ್ದ ಎಲ್ಲ ಕಾರ್ಯಾಚರಣಾ ಅಭಿಯಾನಗಳಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದರು. ಅವರು ಜಮ್ಮು-ಕಾಶ್ಮೀರದಲ್ಲಿ ಅಸಂಖ್ಯಾತ ಯಶಸ್ವಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳ ಭಾಗವಾಗಿದ್ದರು.
ಮೊದಲ ಕಾರ್ಯಾಚರಣೆಯನ್ನು ಆ.23ರಂದು ಹಂದ್ವಾರದ ಖುರ್ಮುರ್‌ನಲ್ಲಿ ನಡೆಸಲಾಗಿತ್ತು. ಇದರಲ್ಲಿ ಪಾಕಿಸ್ತಾನಿ ಮೂಲದ ಮೂವರು ಕಟ್ಟಾ ಎಲ್‌ಇಟಿ ಉಗ್ರರನ್ನು ಬಲಿ ಹಾಕಲಾಗಿತ್ತು.
ಅದಾದೊಡನೆಯೇ ಗೋಸ್ವಾಮಿ, ಕಾಶ್ಮೀರದ ರಫಿಯಾಬಾದ್‌ನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆ.26 ಹಾಗೂ 27ರಂದು 2 ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿತ್ತು. ಆಗ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇನ್ನೂ ಮೂವರು ಎಲ್‌ಇಟಿ ಉಗ್ರರನ್ನು ಸದೆಬಡಿಯಲಾಗಿತ್ತೆಂದು ವಕ್ತಾರ ವಿವರಿಸಿದರು.

Write A Comment