ರಾಷ್ಟ್ರೀಯ

ಎ.ರಾಜಾ ನಿಪುಣ ಸುಳ್ಳುಗಾರ: ಸಿಬಿಐ

Pinterest LinkedIn Tumblr

rajaಹೊಸದಿಲ್ಲಿ, ಸೆ.4: ಮಾಜಿ ಟೆಲಿಕಾಂ ಸಚಿವ ಹಾಗೂ 2ಜಿ ಹಗರಣದ ಪ್ರಮುಖ ಆರೋಪಿ ಎ.ರಾಜಾ ನಿಪುಣ ಸುಳ್ಳುಗಾರನೆಂದು ಸಿಬಿಐ ಶುಕ್ರವಾರ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹೇಳಿದೆ.
2ಜಿ ತರಂಗಗುಚ್ಛ ಲೈಸನ್ಸ್‌ಗಳ ಹಂಚಿಕೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸುಳ್ಳು ಮಾಹಿತಿಗಳನ್ನು ಒದಗಿಸಿ ಅವರನ್ನು ತಪ್ಪು ಹಾದಿಗೆ ಎಳೆದಿರುವುದು ಸಾಕ್ಷಾಧಾರಗಳಿಂದ ತಿಳಿದುಬರುತ್ತದೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಂದಿನ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಮತ್ತು ಸಾಲಿಸಿಟರ್ ಜನರಲ್ ಜಿಇ ವಾಹನ್ವತಿ ಟೆಲಿಕಾಂ ನೀತಿಯ ವಿಚಾರದಲ್ಲಿ ಸಮ್ಮತಿ ಸೂಚಿಸಿದ್ದಾರೆಂದು ತಿಳಿಸಿ, ಅಂದಿನ ಪ್ರಧಾನಿಯನ್ನು ಎ.ರಾಜಾ ಉದ್ದೇಶಪೂರ್ವಕವಾಗಿ ತಪ್ಪು ಹಾದಿಗೆ ಎಳೆದಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆನಂದ್ ಗ್ರೋವರ್ ನ್ಯಾಯಾಲಯದಲ್ಲಿ ಅಂತಿಮ ವಾದ ಮಂಡಿಸುತ್ತ ಹೇಳಿದರು.
ಹಗರಣದ ಪ್ರಮುಖ ಆರೋಪಿ ಎ.ರಾಜಾ ಓರ್ವ ನಿಪುಣ ಸುಳ್ಳುಗಾರ. ಆರೋಪಿ ಕಂಪೆನಿಗಳಿಗೆ ಲಾಭ ಮಾಡಿ ಕೊಡುವ ದುರುದ್ದೇಶದಿಂದ ಅವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಒದಗಿಸಿದ್ದಾರೆ. ದಾಖಲೆಯಲ್ಲಿ ಲಭ್ಯವಿರುವ ಸಾಕ್ಷಾಧಾರಗಳನ್ನು ಆಧರಿಸಿ ನಾನು ಈ ಹೇಳಿಕೆಯನ್ನು ನೀಡುತ್ತಿದ್ದೇನೆ ಎಂದು ಗ್ರೋವರ್ ತಿಳಿಸಿದರು.
ಶುಕ್ರವಾರ ಪ್ರಕರಣದ ವಿಚಾರಣೆ ಮುಕ್ತಾಯವಾಗಲಿಲ್ಲ. ನ್ಯಾಯಾಧೀಶರು ಸೆಪ್ಟಂಬರ್ 7ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.

Write A Comment