ರಾಷ್ಟ್ರೀಯ

ಐಇಎಸ್ ಪರೀಕ್ಷೆ ಗೆದ್ದ ಅಪರಾಜಿತಾ: ಬಡತನದ ಬೇಗೆಯಲ್ಲೂ ದಿನಗೂಲಿ ಕಾರ್ಮಿಕನ ಪುತ್ರಿಯ ಯಶೋಗಾಥೆ

Pinterest LinkedIn Tumblr

Aparajita-Priyadarshini-Beheraಕೇಂದ್ರಪಾರ, ಸೆ.4: ಒಡಿಶಾದ ಕೇಂದ್ರಪಾರ ಜಿಲ್ಲೆಯ ದುರ್ಗಮ ಹಳ್ಳಿಯೊಂದರ ದಿನಗೂಲಿ ಕಾರ್ಮಿಕನ ಪುತ್ರಿಯೊಬ್ಬಳು 2015ನೆ ಸಾಲಿನ ಭಾರತೀಯ ಆರ್ಥಿಕ ಸೇವೆ (ಐಇಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.ಯುಪಿಎಸ್‌ಸಿ ಆಯೋಜಿಸಿದ ಐಇಎಸ್ ಪರೀಕ್ಷೆಯಲ್ಲಿ ಮಹಾನಂಗಲಾ ಗ್ರಾಮದ ಯುವತಿ 24 ವರ್ಷ ವಯಸ್ಸಿನ ಅಪರಾಜಿತಾ ಪ್ರಿಯದರ್ಶಿನಿ ಬೆಹೆರಾ, 13ನೆ ರ್ಯಾಂಕ್ ಗಳಿಸಿದ್ದಾರೆ. ಅಪರಾಜಿತಾ ಅವರ ತಂದೆ, ಅಮೂಲ್ಯ ಕುಮಾರ್ ಬೆಹೆರಾ (50) , ಒಡಿಶಾದ ಬಂದರು ನಗರ ಪಾರಾದೀಪ್‌ನ ರಸಗೊಬ್ಬರ ಕಾರ್ಖಾನೆಯೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅವರು 10 ಸಾವಿರ ರೂ.ಗೂ ಕಡಿಮೆ ಮಾಸಿಕ ಆದಾಯ ಹೊಂದಿದ್ದಾರೆ.
ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಹಾಗೂ ಹೆ ಸ್ಕೂಲ್ ಶಿಕ್ಷಣವನ್ನು ಪಡೆದ ಅಪರಾಜಿತ ಆನಂತರ ಕೇಂದ್ರ ಪಾರಾ ಸಮೀಪದ ಮಾರ್ಶಾಘಾಯ್ ಕಾಲೇಜ್‌ನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪಡೆದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಆಕೆ ಉತ್ಕಲಾ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಶೈಕ್ಷಣಿಕ ವಾತಾವರಣವು ಅಪರಾಜಿತಾಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿತು.
‘‘ನನ್ನ ತಂದೆಯೇ ನನಗೆ ಪ್ರೇರಕ,ಗುರು ಹಾಗೂ ಮಾರ್ಗದರ್ಶಕರಾಗಿದ್ದಾರೆ. ನನ್ನ ಕಲಿಕೆಗೆ ನೆರವಾಗಲು ಅವರು ಬೆವರು ಸುರಿಸಿ ದುಡಿದಿದ್ದಾರೆ. ಬಡತನದ ಬೇಗೆಯು ನನ್ನನೆಂದೂ ಬಾಧಿಸದಂತೆ ಅವರು ನೋಡಿಕೊಂಡಿದ್ದಾರೆ. ನನ್ನ ಈ ಅಖಿಲ ಭಾರತ ಮಟ್ಟದ ಉದ್ಯೋಗವನ್ನು ಅವರಿಗೆ ಸಮರ್ಪಿಸುತ್ತಿದ್ದೇನೆ’’ ಎಂದು ಅಪರಾಜಿತಾ ಹೇಳಿದ್ದಾರೆ.
‘‘ಕಠಿಣ ಪರಿಶ್ರಮದ ಜೊತೆಗೆ ಪೋಷಕರ ಬೆಂಬಲ ನನ್ನ ಯಶಸ್ಸಿಗೆ ದಾರಿ ಮಾಡಿಕೊಟ್ಟಿತು.ಐಇಎಸ್‌ನ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ವೌಖಿಕ ಸಂದರ್ಶನದ ಯಶಸ್ಸು ಕಾಣುವ ಬಗ್ಗೆ ನನಗೆ ಆತಂಕವಿತ್ತು. ಆದಾಗ್ಯೂ ಸಂದರ್ಶಕ ಸಮಿತಿಯು ಬೆಂಬಲ ನೀಡಿತು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು’’ ಎಂದವರು ಹೇಳಿದರು.

Write A Comment