ರಾಷ್ಟ್ರೀಯ

ಕೈಯಲ್ಲಿ ಹಣವಿಲ್ಲದೆ ಮೃತ ಹೆಂಡತಿಯನ್ನು ಹೆಗಲ ಮೇಲೆ, ಮಗುವನ್ನು ಕೈಯಲ್ಲಿ ಹಿಡಿದು ಬರೀ ಕಾಲಲ್ಲಿ ನಡೆದ ಪತಿರಾಯ !

Pinterest LinkedIn Tumblr

body

ಹೈದರಾಬಾದ್, ಸೆ.3: ಜಗತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಷ್ಟ. ಹೊಟ್ಟೆಪಾಡಿಗೆ ಕೂಲಿನಾಲಿ ಮಾಡಿ ಬದುಕಲು ರಾಜಧಾನಿಗೆ ಬರುವ ಬಡಜನ ಎಂತೆಂತಹ ಕಷ್ಟ ಎದುರಿಸುತ್ತಾರೆ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.

ಮೆಹಬೂಬ್ ನಗರ ಜಿಲ್ಲೆಯ ಉಟ್ಕೂರ್ ನಿವಾಸಿ ಮೊಹಮದ್ ಷಫಿ ಎನ್ನೋ ಬಡಕೂಲಿಕಾರ್ಮಿಕ ನಾಲ್ಕು ವರ್ಷಗಳ ಹಿಂದೆ ಹೊಟ್ಟೆಪಾಡಿಗೆ ಅಂತ ಪತ್ನಿ, ತನ್ನಿಬ್ಬರು ಮಕ್ಕಳೊಂದಿಗೆ ಹೈದರಾಬಾದ್‌ಗೆ ಬಂದಿದ್ದಾನೆ. ಕೂಲಿ ಕೆಲಸ ಮಾಡ್ತಾ ಬದುಕು ಸಾಗಿಸುತ್ತಿದ್ದ ಷಫಿ ಕಾಟೇದಾನ್ ಏರಿಯಾದ ಬಾಡಿಗೆ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಬೆಳಿಗ್ಗೆ ಹೋದರೆ ರಾತ್ರಿ ಮನೆಗೆ ಬರುತ್ತಾನೆ.

ಹೀಗಿರುವಾಗ ಹೆಂಡತಿ ಗರ್ಭಿಣಿಯಾಗಿದ್ದಾಳೆ. ಮೊನ್ನೆ ಹೆರಿಗೆ ನೋವು ಅಂತ ಆಸ್ಪತ್ರೆ ಸೇರಿದ್ದಾಳೆ. ಮಗುವನ್ನು ಹೆತ್ತ ಬಳಿಕ ಸಾವನ್ನಪ್ಪಿದ್ದಾಳೆ. ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಷಫಿ ಮನೆಗೆ ಬಂದಾಗ ಹೆಂಡತಿ ಆಸ್ಪತ್ರೆ ಸೇರಿರುವುದು ಗೊತ್ತಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಅಷ್ಟರಲ್ಲಿ ಹೆಂಡತಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯ ಮೂಲೆಯೊಂದರಲ್ಲಿ ಹೆಂಡತಿ ಶವವಿದೆ. ಪಕ್ಕದಲ್ಲಿ ಆಗಷ್ಟೇ ಹುಟ್ಟಿದ ಮಗುವಿದೆ. ಷಫಿ ಅತ್ತಿದ್ದಾನೆ. ಹೇಗಾಯ್ತು ಅಂತ ವೈದ್ಯರನ್ನು ಸಿಬ್ಬಂದಿಯನ್ನು ವಿಚಾರಿಸಿದ್ದಾನೆ. ಯಾರಿಂದಲೂ ಸರಿಯಾದ ಉತ್ತರವಿಲ್ಲ.

ಷಫಿ ಬಳಿ ಹಣವಿಲ್ಲ. ನಗರದಲ್ಲಿ ಯಾರೂ ಪರಿಚಿತರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಷಫಿ ಆಸ್ಪತ್ರೆಯಲ್ಲಿ ಸತ್ತ ಹೆಂಡತಿಯ ಶವವನ್ನು ಭುಜದ ಮೇಲೆ ಹೊತ್ತು, ಒಂದು ಕೈಯಲ್ಲಿ ಆಗಷ್ಟೇ ಹುಟ್ಟಿದ ಮಗುವನ್ನು ಎತ್ತಿಕೊಂಡು ಇನ್ನಿಬ್ಬರು ಚಿಕ್ಕಮಕ್ಕಳೊಂದಿಗೆ ಹೊರಬಂದಿದ್ದಾನೆ. ಎಲ್ಲಿಗೆ ಹೋಗುವುದು ತಿಳಿದಿಲ್ಲ. ತನ್ನೂರು ಮೆಹಬೂಬ್ ನಗರ ಜಿಲ್ಲೆಗೆ ಹೋಗಲು ಸಿದ್ಧನಾಗಿದ್ದಾನೆ. ಈ ಹಂತದಲ್ಲಿ ನೋಡಿದ ಅವರಿವರು ಅಯ್ಯೋ ಎಂದರೇ ಹೊರತು ಆತನ ಕಷ್ಟವೇನು, ಆತನಿಗೆ ಯಾವ ನೆರವು ಬೇಕು ಅಂತ ಕೇಳಿಲ್ಲ.

ಇನ್ನು ಷಫಿ ಕಷ್ಟ ಷಫಿಗೆ. ನಿನ್ನೆ ಭಾರತ ಬಂದ್. ಸಿಟಿ ಬಸ್ ಇಲ್ಲ. ಹೆಂಡತಿ ಶವವನ್ನು ಭುಜದ ಮೇಲೆ ಹೊತ್ತುಕೊಂಡು, ಸ್ವಲ್ಪ ಹೊತ್ತು ಚಿಕ್ಕಮಕ್ಕಳ ಕೈಯಲ್ಲಿ ಹಸುಗೂಸನ್ನು ಕೊಟ್ಟು ಹಾಗೇ ಹೀಗೆ ಸರ್ಕಸ್ ಮಾಡ್ತ ಮೆಹಬೂಬ್ ನಗರದ ಬಸ್ ಹತ್ತಿದ್ದಾನೆ. ಬಸ್ ಡ್ರೈವರ್, ಕಂಡಕ್ಟರ್‌ಗೆ ಕಾಡಿಬೇಡಿ ತಮ್ಮನ್ನು ಊರು ತಲುಪಿಸಲು ಕೇಳಿಕೊಂಡಿದ್ದಾನೆ. ಅಂತೆಯೇ ಮೆಹಬೂಬ್ ನಗರ ಬಸ್ ನಿಲ್ದಾಣದಲ್ಲಿ ಇಳಿದಿದ್ದಾನೆ. ಅಲ್ಲಿಂದ ತನ್ನ ಹುಟ್ಟೂರಿಗೆ ಹೋಗಬೇಕು. ಬಂದ್ ಕಾರಣಕ್ಕೆ ಅಲ್ಲಿಯೂ ಯಾವುದೇ ವಾಹನವಿಲ್ಲ.

ಹೈದರಾಬಾದ್‌ನ ಬೀದಿಗಳಲ್ಲಿ ನಡೆದಂತೆಯೇ ಹೆಂಡತಿಯ ಶವವನ್ನು ಭುಜದ ಮೇಲೆ ಹೊತ್ತು, ಹಸುಗೂಸನ್ನು ಸ್ವಲ್ಪ ಹೊತ್ತು ಇಬ್ಬರು ಚಿಕ್ಕಮಕ್ಕಳ ಕೈಯಲ್ಲಿ ಕೊಡುತ್ತಾ ಸ್ವಲ್ಪಹೊತ್ತು ತಾನೇ ಎತ್ತಿಕೊಂಡು ತನ್ನ ಊರಿನತ್ತ ಹೊರಟಿದ್ದ. ಆಗ ಬಸ್ ನಿಲ್ದಾಣದಲ್ಲಿದ್ದ ಜನ ಇದನ್ನು ಗಮನಿಸಿ ಏನು, ಎತ್ತ ಅಂತ ವಿಚಾರಿಸಿದ್ದಾರೆ.

ಷಫಿ ನಡೆದ ಘಟನೆ ಹೇಳಿಕೊಂಡು ಅತ್ತಿದ್ದಾನೆ. ಕರುಣೆ ತೋರಿದ ಜನ ತಲಾ ಇಷ್ಟಿಷ್ಟು ಚಂದಾ ಸಂಗ್ರಹಿಸಿ ಸುಮಾರು 6 ಸಾವಿರ ರೂಪಾಯಿಗಳಷ್ಟು ಹಣವನ್ನು ಷಫಿಗೆ ನೀಡಿದ್ದಾರೆ. ಷಫಿ ಮತ್ತವರ ಮಕ್ಕಳು ಹಾಗೂ ಪತ್ನಿಯ ಶವವನ್ನು ಆಟೋದಲ್ಲಿ ಆತನ ಊರಿಗೆ ಸಾಗಿಸಿದ್ದಾರೆ. ಹುಟ್ಟಿದ ಮಗುವಿನ ಆರೋಗ್ಯವೂ ಚೆನ್ನಾಗಿಲ್ಲ ಎನ್ನಲಾಗಿದ್ದು, ಮಗುವನ್ನು ಚೈಲ್ಡ್ ಹೆಲ್ತ್ ಕೇರ್ ಸೆಂಟರ್‌ಗೆ ದಾಖಲಿಸಿದ್ದಾರೆ.

Write A Comment