ರಾಷ್ಟ್ರೀಯ

ಮುಸ್ಲಿಮರ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ರೂಪಿಸಿ: ಉಪರಾಷ್ಟ್ರಪತಿ ಅನ್ಸಾರಿ ಕರೆ

Pinterest LinkedIn Tumblr

Hamid-Ansari_b_marಹೊಸದಿಲ್ಲಿ,ಆ.31: ದೇಶದಲ್ಲಿಯ ಮುಸ್ಲಿಮರು ಎದುರಿಸುತ್ತಿರುವ ಅನನ್ಯತೆ ಮತ್ತು ಭದ್ರತೆಯ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವಂತೆ ಸೋಮವಾರ ಇಲ್ಲಿ ಬಲವಾಗಿ ಪ್ರತಿಪಾದಿಸಿದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರು, ಸರಕಾರವು ‘ಎಲ್ಲರಿಗಾಗಿ ಪ್ರಗತಿ’ನೀತಿಯನ್ನು ಸಮರ್ಥಿಸುವ ದೃಢವಾದ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಸ್ಲಿಮರಿಗೆ ಭದ್ರತೆಯನ್ನು ಒದಗಿಸುವಲ್ಲಿ ವೈಫಲ್ಯ ಸೇರಿದಂತೆ ಅವರ ವಿರುದ್ಧದ ತಾರತಮ್ಯವನ್ನು ಸರಕಾರವು ಆದಷ್ಟು ಶೀಘ್ರ ನಿವಾರಿಸಬೇಕು ಮತ್ತು ಅದಕ್ಕಾಗಿ ಸೂಕ್ತ ಮಾರ್ಗೋಪಾಯಗಳನ್ನು ರೂಪಿಸಬೇಕೆಂದು ಅವರು ಹೇಳಿದರು.

ಮುಸ್ಲಿಂ ಸಂಘಟನೆಗಳ ಅಗ್ರ ವೇದಿಕೆ ಯಾಗಿರುವ ಅಖಿಲ ಭಾರತ ಮಜ್ಲಿಸ್-ಎ-ಮುಷಾವರತ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿಗಳು,ಸಬಲೀಕರಣ,ರಾಜ್ಯಗಳ ಸಂಪನ್ಮೂಲಗಳಲ್ಲಿ ಸಮನಾದ ಪಾಲು ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯಯಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮುಸ್ಲಿಮರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುವ ಸವಾಲು ಕೂಡ ರಾಷ್ಟ್ರದ ಎದುರು ಇದೆ ಎಂದು ಹೇಳಿದರು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷವಾಕ್ಯದ ಅಧಿಕೃತ ಧ್ಯೇಯವು ಶ್ಲಾಘನೀಯವಾಗಿದೆ ಎಂದ ಅವರು, ಎಲ್ಲರಿಗೂ ಸಮಾನ ಆರಂಭವನ್ನೊದಗಿಸುವ ಮತ್ತು ಅಗತ್ಯ ಗತಿಯಲ್ಲಿ ಮುಂದೆ ಸಾಗುವಂತೆ ಸಮರ್ಥವನ್ನಾಗಿಸುವ ದೃಢವಾದ ಕ್ರಮವು ಇದಕ್ಕೆ ಪೂರ್ವ ಅಗತ್ಯವಾಗಿದೆ ಎಂದರು.

ವ್ಯಕ್ತಿಗತ, ಸಾಮಾಜಿಕ ಮತ್ತು ಸರಕಾರಿ ಉಪಕ್ರಮಗಳ ಮೂಲಕ ಇಂತಹ ಸಾಮರ್ಥ್ಯವನ್ನು ಅಭಿವೃದ್ಧಿ ಗೊಳಿಸಬೇಕಾಗಿದೆ. ಕಾರ್ಯಕ್ರಮಗಳನ್ನೇನೋ ಹೇರಳವಾಗಿ ಘೋಷಿಸಲಾಗಿದೆ,ಅವುಗಳ ಅನುಷ್ಠಾನ ಈಗಿನ ಅಗತ್ಯವಾಗಿದೆ ಎಂದು ಅನ್ಸಾರಿ ನುಡಿದರು.

Write A Comment