ರಾಷ್ಟ್ರೀಯ

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೋವಾ ಪ್ರವೇಶಕ್ಕೆ ಸುಪ್ರೀಂ ನಕಾರ

Pinterest LinkedIn Tumblr

Pramod_mutalik_picಹೊಸದಿಲ್ಲಿ, ಆ.31: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಸಹಚರರ ಗೋವಾ ಪ್ರವೇಶವನ್ನು ನಿರ್ಬಂಧಿಸಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಗೋವಾದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಈ ಆದೇಶವನ್ನು ನೀಡಿರಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಮತ್ತು ನ್ಯಾ.ಅಮಿತಾವ್ ರಾಯ್ ಅರ್ಜಿಯನ್ನು ವಜಾಗೊಳಿಸುತ್ತ ಹೇಳಿದರು.

ಪ್ರಮೋದ್ ಮುತಾಲಿಕ್ ಮತ್ತು ಅವರ ಸಂಘಟನೆಯ ಕಾರ್ಯಕರ್ತರಿಗೆ ಗೋವಾ ಪ್ರವೇಶವನ್ನು ನಿರ್ಬಂಧಿಸಿ ರಾಜ್ಯದ ಪೊಲೀಸರು ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದ್ದರು. ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಜುಲೈ 2ರಂದು ಈ ಆದೇಶದಲ್ಲಿ ಮಧ್ಯ ಪ್ರವೇಶ ಮಾಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಮುತಾಲಿಕ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ತಮ್ಮ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 144ರಡಿಯಲ್ಲಿ ಹೇರಿರುವ ಆದೇಶ ಕಾನೂನುಬಾಹಿರವಾಗಿದ್ದು, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ತಮಗೆ ಪ್ರಶ್ನೆ ಮಾಡಲು ಅವಕಾಶ ನೀಡದೆ ಮತ್ತೆ ಮತ್ತೆ ಆದೇಶ ನೀಡಲಾಗಿದೆ ಎಂದು ಮುತಾಲಿಕ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಗೋವಾದ ಜನತೆ ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳಲಿದ್ದಾರೆ. ನೀವೇನು ಮಾಡುತ್ತೀರಿ? ನಿಮ್ಮ ಜನರು ಕ್ಷುಲ್ಲಕ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗುವವರು. ಶ್ರೀರಾಮ ಸೇನೆಯ ಕಾರ್ಯಕರ್ತರು ಪಬ್‌ಗಳಿಗೆ ನುಗ್ಗಿ ಯುವಕ-ಯುವತಿಯರ ಮೇಲೆ ಹಲ್ಲೆ ನಡೆಸುತ್ತಾರೆ. ಕ್ಷಮಿಸಿ, ಈಗ ನಿಮಗೆ ಅವಕಾಶ ನೀಡುವುದಿಲ್ಲ. ಆರು ತಿಂಗಳು ಕಳೆದ ಮೇಲೆ ಬನ್ನಿ.
 ಸುಪ್ರೀಂ ಕೋರ್ಟ್

Write A Comment