ಹೊಸದಿಲ್ಲಿ, ಆ.29: ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ರನ್ನು ರಾಜಕೀಯ ರಂಗದ ಚಾಣಾಕ್ಷ ನರಿ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕರೆದಿದ್ದಾರೆ. ತನ್ನ ಇತ್ತೀಚಿನ ‘ಟು ದಿ ಬ್ರಿಂಕ್ ಆ್ಯಂಡ್ ಬ್ಯಾಕ್’ ಪುಸ್ತಕದಲ್ಲಿ ರಾವ್ರನ್ನು ‘ನರಿ’ ಎಂದು ವರ್ಣಿಸಿರುವ ಅವರು, ಬಿಕ್ಕಟ್ಟುಗಳನ್ನು ನಿಭಾಯಿಸುವ ಕುರಿತಂತೆ ಅವರು ಭಾರೀ ತಂತ್ರಗಾರರಾಗಿದ್ದರು ಎಂದಿದ್ದಾರೆ.
1991ರಲ್ಲಿ ಪಾವತಿಬಾಕಿಯಿಂದ ಉದ್ಭವಿಸಿದ್ದ ಆರ್ಥಿಕ ವಿಪತ್ತಿನ ವೇಳೆಯ ನಿರ್ಣಾಯಕ 90 ದಿನಗಳ ಅವಧಿಯಲ್ಲಿ ಅವರು ಗಮನಾರ್ಹವಾಗಿ ನಿರ್ಣಾಯಕರಾಗಿದ್ದರೆಂದು ಹೇಳಿದ್ದಾರೆ.
ರಾವ್ ಭಾರತದ ಡೆಂಗ್ ಝಿಯಾಪಿಂಗ್ (ಚೀನಾದಲ್ಲಿ ಸುಧಾರಣೆ ಆರಂಭಿಸಿದ ಚೀನಿ ಕಮ್ಯುನಿಸ್ಟ್ ನಾಯಕ) ಎಂದಿರುವ ಜೈರಾಮ್ ರಮೇಶ್, 1991ರ ಜೂನ್, ಜುಲೈ ಆಗಸ್ಟ್ಗಳಲ್ಲಿ ಅವರು, ಅವರು ತಾನೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದರು ಎಂದು ಹೇಳಿದ್ದಾರೆ.
ಈಸಾಯಾ ಬರ್ಲಿನ್ನ ಉದಾಹರಣೆಯೊಂದನ್ನು ನೀಡಿರುವ ಅವರು, ಮನಮೋಹನ್ ಸಿಂಗ್ ಕೇವಲ ಆರ್ಥಿಕ ಸುಧಾರಣೆಯೆಂಬ ಒಂದೇ ಒಂದು ದೊಡ್ಡ ವಿಷಯ ಅರಿತಿದ್ದ ಮುಳ್ಳುಹಂದಿಯಾದರೆ, ರಾವ್, ಅನೇಕ ವಿಷಯಗಳನ್ನು ತಿಳಿದಿದ್ದ ‘ನರಿ’ಯಾಗಿದ್ದರು. ಈ ಮುಳ್ಳುಹಂದಿ-ನರಿಗಳ ಜೋಡಿ, ಬಹುಶಃ ಅತ್ಯಂತ ಕತ್ತಲೆಯ ಕ್ಷಣದಲ್ಲಿ ಭಾರತವನ್ನು ಕಾಪಾಡಿತ್ತು. 1981ರಲ್ಲಿ ಭಾರತವು 2015ರ ಗ್ರೀಸ್ ದೇಶವನ್ನು ಪ್ರತಿಬಿಂಬಿಸಿತ್ತು. ಅದಕ್ಕೆ ರಾವ್-ಸಿಂಗ್ ಜೋಡಿ ಕಾರಣವಾಗಿರಲಿಲ್ಲವೆಂದು ವಿವರಿಸಿದ್ದಾರೆ.
ರಾವ್, ಭಾರತವನ್ನು ಅತ್ಯಂತ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಮುನ್ನಡೆಸಿದ್ದರೆಂಬುದರಲ್ಲಿ ಅನುಮಾನವೇ ಇಲ್ಲ. ಅವರೊಂದು ಅದ್ಭುತವೆಂದಷ್ಟೇ ತಾನು ಹೇಳಬಲ್ಲೆ. ಆರಂಭದಿಂದಲೇ ರಾವ್ ಎಲ್ಲರ ಊಹೆಗಳನ್ನು ತಲೆಕೆಳಗೆ ಮಾಡಿದ್ದರು. ‘ನಿರ್ಧಾರವನ್ನು ಕೈಗೊಳ್ಳದಿರುವುದೂ ಒಂದು ನಿರ್ಧಾರವೇ’ ಎಂದು ಪ್ರಸಿದ್ಧವಾಗಿ ಟೀಕಿಸಲ್ಪಟ್ಟಿದ್ದ ಅವರು, ಆರಂಭದ ತಿಂಗಳುಗಳಲ್ಲಿ ಗಮನಾರ್ಹವಾಗಿ ನಿರ್ಧಾರಾತ್ಮಕರಾಗಿದ್ದರು. ಅತ್ಯಂತ ಕುಶಲತೆ ಹಾಗೂ ಧೈರ್ಯದಿಂದ ಶೀಘ್ರ ನಿರ್ಧಾರಗಳನ್ನು ಕೈಗೊಂಡು, ರಾವ್ ಬದಲಾವಣೆಯನ್ನು ತಂದರೆಂದು ಜೈರಾಂ ರಮೇಶ್ ಬರೆದಿದ್ದಾರೆ.