ರಾಷ್ಟ್ರೀಯ

ಹಾರ್ದಿಕ್ ಪಟೇಲ್‌ನಿಂದ ದೂರ ಸರಿದ ಲಾಲು-ನಿತೀಶ್

Pinterest LinkedIn Tumblr

hardikಪಾಟ್ನಾ, ಆ. 29: ಪಾಟದಾರ್ ಅಮಾನತ್ ಆಂದೋಲನ್ ಸಮಿತಿಯ ಕಾರ್ಯಕರ್ತ ಹಾರ್ದಿಕ್ ಪಟೇಲ್, ಶಿವಸೇನಾ ಸಿದ್ಧಾಂತಿ ಬಾಳಾ ಠಾಕ್ರೆ ಹಾಗೂ ಎಂಎನ್‌ಎಸ್ ವರಿಷ್ಠ ರಾಜ್‌ಠಾಕ್ರೆಯವರನ್ನು ಹೊಗಳಿದ ಒಂದು ದಿನದ ಬಳಿಕ, ಜೆಡಿಯು ಹಾಗೂ ಆರ್‌ಜೆಡಿ ಶುಕ್ರವಾರ ಪಿಎಎಸ್ ಚಳವಳಿಯಿಂದ ದೂರ ಸರಿಯುವ ಮೂಲಕ ತಿಪ್ಪರಲಾಗ ಹೊಡೆದಿವೆ.

ಈ ವಾರಾರಂಭದಲ್ಲಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ತಮ್ಮನು ಒಬಿಸಿಗೆ ಸೇರಿಸಬೇಕೆಂಬ ಗುಜರಾತ್‌ನ ಪಟೇಲ್ ಸಮುದಾಯದವರ ಬೇಡಿಕೆಯನ್ನು ಬೆಂಬಲಿಸಿದ್ದರು. ಆದರೆ, ಜೆಡಿಯು ಅಧ್ಯಕ್ಷ ಶರದ್ ಯಾದವ್ ಇದಕ್ಕೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, ಪಟೇಲರು ಮೀಸಲಾತಿಗೆ ಅರ್ಹರಲ್ಲ ಎಂದಿದ್ದರು. ಆದರೆ, ಠಾಕ್ರೆಗಳ ಕುರಿತಾಗಿ ಹಾರ್ದಿಕ್‌ರ ಹೊಗಳಿಕೆ ಎರಡೂ ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸುವಂತೆ ಮಾಡಿದೆ.

ಲಾಲು ಹಾಗೂ ನಿತೀಶರಿಬ್ಬರೂ ಈ ಹಿಂದೆ ಠಾಕ್ರೆಯವರ ರಾಜಕೀಯದ ಬ್ರಾಂಡನ್ನು ಪ್ರಬಲವಾಗಿ ವಿರೋಧಿಸಿದ್ದರು. ದಿವಂಗತ ಬಾಳಾ ಠಾಕ್ರೆಯವರು ಮತ್ತೆ ಮತ್ತೆ ಮುಂಬೈಯಲ್ಲಿ ವಾಸಿಸುವ ಬಿಹಾರಿಗಳ ವಿರುದ್ಧ ಗುರಿಯಿರಿಸಿದ್ದರು ಹಾಗೂ ಅವರ ವಿರುದ್ಧ ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಅಗ್ರಲೇಖನಗಳನ್ನು ಬರೆದಿದ್ದರು. ಅವರ ಸೋದರ ಸಂಬಂಧಿ ರಾಜ್‌ಠಾಕ್ರೆ, ಮುಖ್ಯವಾಗಿ ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರನ್ನು ಮಹಾರಾಷ್ಟ್ರದಿಂದ ಹೊರಗಟ್ಟಲು ಕೆಲವು ವರ್ಷಗಳ ಹಿಂದೆ ಹಿಂಸಾತ್ಮಕ ಅಭಿಯಾನ ನಡೆಸಿದ್ದರು.

ಹಾರ್ದಿಕ್ ತನ್ನ ಗುರಿಯನ್ನು ಬದಲಿಸಿದ್ದರೆ ಹಾಗೂ ‘ವಿಭಜಿಸಿ ಆಳುವ’ ತಂತ್ರ ಅನುಸರಿಸಿದ್ದರೆ, ತಾವು ಅವರೊಂದಿಗೆ ನಿಲ್ಲುವುದು ಸಾಧ್ಯವಾಗದೆಂದು ಲಾಲುಪ್ರಸಾದರ ಪುತ್ರ ತೇಜಸ್ವಿ ಶುಕ್ರವಾರ ಹೇಳಿದ್ದರು.

Write A Comment