ರಾಷ್ಟ್ರೀಯ

ಗುಜರಾತ್ ಕಸ್ಟಡಿ ಸಾವು: 9 ಪೊಲೀಸರ ವಿರುದ್ಧ ಮೊಕದ್ದಮೆ

Pinterest LinkedIn Tumblr

Patidar community agitationಅಹ್ಮದಾಬಾದ್, ಆ. 29: ಪಟೇಲರ ಕೋಟಾ ಚಳವಳಿಯ ಅವಧಿಯಲ್ಲಿ ಸಂಭವಿಸಿದ 32 ವರ್ಷದ ವ್ಯಕ್ತಿಯೊಬ್ಬನ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಇನ್‌ಸ್ಪೆಕ್ಟರ್‌ಗಳು ಮತ್ತು ಒಬ್ಬ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಒಂಬತ್ತು ಪೊಲಿೀಸರ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಕಸ್ಟಡಿ ಸಾವಿನ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ನಾಳೆ ನಡೆಯಲಿರುವ ಮೃತ ಶ್ವೇತಾಂಗ ಪಟೇಲ್‌ರ ಅಂತ್ಯಸಂಸ್ಕಾರದಲ್ಲಿ ತಾನು ಭಾಗವಹಿಸುವ ಸಾಧ್ಯತೆಯಿದೆ ಎಂದು ಗುಜರಾತ್‌ನಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಸಲಾಗುತ್ತಿರುವ ಚಳವಳಿಯ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ‘‘ಏನಾದರೂ ಸಂಭವಿಸಿದರೆ’’ ಅದಕ್ಕೆ ಸರಕಾರವೇ ಹೊಣೆ ಎಂಬುದಾಗಿ ಅವರು ಎಚ್ಚರಿಸಿದ್ದಾರೆ.
ಶ್ವೇತಾಂಗ ಪಟೇಲ್ ಸಾವಿನ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಪಿ.ಡಿ. ಪರ್ಮಾರ್ ಮತ್ತು ಆರ್.ಆರ್. ವಾಸವ ಹಾಗೂ ಇತರ ಏಳು ಮಂದಿ ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಕಮಿಶನರ್ ಕೆ.ಡಿ. ಪಾಂಡ್ಯ ತಿಳಿಸಿದರು.
ಆದರೆ, ಕಸ್ಟಡಿ ಸಾವಿಗೆ ಕಾರಣರಾದ ಎಲ್ಲರ ವಿರುದ್ಧ ಮೊಕದ್ದಮೆ ದಾಖಲಾಗಬೇಕು ಎಂದು ನಾವು ಹೇಳಿದ್ದೇವೆ; ಆದರೆ, ಅದರಲ್ಲಿ ಎಲ್ಲ ಪೊಲೀಸರ ಹೆಸರಿಲ್ಲ ಎಂದು ಸಂತ್ರಸ್ತ ಕುಟುಂಬದ ವಕೀಲರು ದೂರಿದ್ದಾರೆ.
‘‘ಸಾವಿಗೆ ಕಾರಣರಾದ ಎಲ್ಲರನ್ನು ಹೆಸರಿಸಬೇಕು ಎಂಬುದಾಗಿ ನಾವು ಹೇಳಿದ್ದೇವೆ. ಆದರೆ, ಇದರಲ್ಲಿ ಎಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿಲ್ಲ. ಪ್ರಕರಣದಲ್ಲಿ ಕಿರಿಯ ದರ್ಜೆಯ ಪೊಲೀಸರನ್ನು ಬಲಿಪಶು ಮಾಡುವುದು ನಮಗಿಷ್ಟವಿಲ್ಲ’’ ಎಂದು ಅವರು ಹೇಳಿದರು.

Write A Comment