ರಾಷ್ಟ್ರೀಯ

ಆನೆಗಳನ್ನು ಹಿಂಸಿಸಿದರೆ ಕಠಿಣ ಕ್ರಮ

Pinterest LinkedIn Tumblr

elepantತಿರುವನಂತಪುರಂ,ಆ.29: ರಾಜ್ಯದಲ್ಲಿ ಆನೆಗಳಿಗೆ ಹಿಂಸೆಯನ್ನು ತಡೆಗಟ್ಟುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪೊಂದರಲ್ಲಿ ಬೆಟ್ಟು ಮಾಡಿರುವ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆಯು ಸಾಕುಆನೆಗಳಿಗೆ ಯಾವುದೇ ಬಗೆಯ ಹಿಂಸೆಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಸಾಕುಆನೆಗಳನ್ನು ಕ್ರೌರ್ಯಕ್ಕೊಳಪಡಿಸಿದರೆ ಅವುಗಳನ್ನು ಸರಕಾರಕ್ಕೆ ಮುಟ್ಟುಗೋಲು ಸೇರಿದಂತೆ ಗಂಭೀರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಜಿ.ಹರಿಕುಮಾರ್ ಅವರು ಸುತ್ತೋಲೆಯೊಂದರಲ್ಲಿ ತಿಳಿಸಿದ್ದಾರೆ.

ಆನೆಗಳಿಗೆ ಯಾವುದೇ ಬಗೆಯ ಹಿಂಸೆಯಾಗದಂತೆ ಅವುಗಳ ಮಾಲಕರು,ದೇವಸ್ವಂ ಮಂಡಳಿ,ಜಿಲ್ಲಾ ಸಮಿತಿ ಮತ್ತು ಸಹಾಯಕ ಸಂರಕ್ಷಣಾಧಿಕಾರಿಗಳು(ಸಾಮಾಜಿಕ ಅರಣ್ಯ) ನೋಡಿಕೊಳ್ಳಬೇಕು. ಆನೆಗಳಿಗೆ ಹಿಂಸೆ ನೀಡಿರುವುದು ಕಂಡು ಬಂದರೆ ಸಹಾಯಕ ಸಂರಕ್ಷಣಾಧಿಕಾರಿಗಳು(ಸಾ.ಅ) ಕ್ರಿಮಿನಲ್ ಕಾನೂನು ಕ್ರಮವನ್ನು ಜರಗಿಸುವ ಜೊತೆಗೆ ಸರಕಾರಕ್ಕೆ ಆನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕ್ರಮ ಹಾಗೂ ಇತರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಎಸಿಎಫ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಸಾಕಾನೆಗಳ ಗಣತಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು. ಆನೆಗಳ ಮಾಲಕರಲ್ಲಿ ಮಾಹಿತಿ ಪುಸ್ತಕಗಳಿಲ್ಲದಿದ್ದರೆ ಒಂದು ವಾರದೊಳಗೆ ಅವುಗಳನ್ನು ಪಡೆದುಕೊಳ್ಳಬೇಕು. ಕೇರಳ ಸಾಕಾನೆಗಳ(ನಿರ್ವಹಣೆ ಮತ್ತು ವ್ಯವಸ್ಥಾಪನೆ) ನಿಯಮಾವಳಿಗಳು,2012ರ ಕಟ್ಟುನಿಟ್ಟಾದ ಅನುಷ್ಠಾನಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸಂಚಾಲಕರು(ಎಸಿಎಫ್‌ಗಳು-ಸಾಮಾಜಿಕ ಅರಣ್ಯ) ಜಿಲ್ಲಾ ಸಮಿತಿಯ ಸಭೆಗಳನ್ನು ನಡೆಸಬೇಕು ಎಂದೂ ಸುತ್ತೋಲೆಯು ನಿರ್ದೇಶನ ನೀಡಿದೆ.
ಕೇರಳದಲ್ಲಿ, ನಿರ್ದಿಷ್ಟವಾಗಿ ದೇವಸ್ಥಾನಗಳಲ್ಲಿ ಸಾಕುಆನೆಗಳಿಗೆ ಹಿಂಸೆಯನ್ನು ನೀಡಲಾಗುತ್ತದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆ.18ರಂದು ರಾಜ್ಯದ ಮುಖ್ಯ ವನ್ಯಜೀವಿ ಅಧಿಕಾರಿಗೆ ಆದೇಶಿಸಿತ್ತು.

Write A Comment