ರಾಷ್ಟ್ರೀಯ

ಸಮಾನ ಹುದ್ದೆ ಸಮಾನ ಪಿಂಚಣಿ ನಿರಶನ: ಇನ್ನೊಬ್ಬ ಮಾಜಿ ಯೋಧ ಆಸ್ಪತ್ರೆಗೆ ದಾಖಲು

Pinterest LinkedIn Tumblr

ex-srevic-29ಹೊಸದಿಲ್ಲಿ, ಆ.29: ಸಮಾನ ಹುದ್ದೆ ಸಮಾನ ಪಿಂಚಣಿ ಜಾರಿಗಾಗಿ ಆಗ್ರಹಿಸಿ ಇಲ್ಲಿನ ಜಂತರ್-ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದ ಮಾಜಿ ಯೋಧ ಹವಾಲ್ದಾರ್ ಅಭಿಷೇಕ್ ಸಿಂಗ್‌ರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮ್ಮ ಬೇಡಿಕೆಗಾಗಿ ಮಾಜಿ ಯೋಧರು 2 ತಿಂಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೆ ಕನಿಷ್ಠ ನಾಲ್ವರು ಮಾಜಿ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಮೊದಲ ಬಾರಿಗೆ ಮಾಜಿ ಯೋಧರು, ಪಾಕಿಸ್ತಾನದ ವಿರುದ್ಧದ 1965ರ ಯುದ್ಧದ ವಿಜಯಾಚರಣೆಯ ಸುವರ್ಣ ಸಮಾರಂಭದ ಅಧಿಕೃತ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಪ್ರತಿಭಟನಾ ಸ್ಥಳದಲ್ಲಿ ತಾವೇ ಸಮಾರಂಭ ಆಚರಿಸಿದ್ದರು.
ಪ್ರತಿಭಟನಾ ನಿರತ ಮಾಜಿ ಸೈನಿಕರು ನಿನ್ನೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗರನ್ನು ಭೇಟಿಯಾಗಿದ್ದರು. ಒಂದರ ಹೊರತು ಎಲ್ಲ ಅಡ್ಡಿಗಳು ಪರಿಹಾರವಾಗಿವೆ. ಸರಕಾರವು ಪ್ರತಿ 5 ವರ್ಷಗಳಿಗೊಮ್ಮೆ ಪಿಂಚಣಿಗಳನ್ನು ಮರು ಪರಿಶೀಲಿಸುವ ತನ್ನ ಕೊಡುಗೆಗೆ ಬದ್ಧವಾಗಿದೆ. ಆದರೆ, ಮಾಜಿ ಯೋಧರು, ಪ್ರತಿ ವರ್ಷ ಅಥವಾ ಕನಿಷ್ಠ 2 ವರ್ಷಗಳಿಗೊಮ್ಮೆಯಾದರೂ ಅದನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ಪರಿಶೀಲನೆಯು ನಿಗದಿತ ಅವಧಿಯ ಬಳಿಕ ಪಿಂಚಣಿಯನ್ನು ಹೆಚ್ಚಿಸುವ ಮೂಲಕ ಕಾಲ ಬಾಧಿತ ಪಿಂಚಣಿ ದರವನ್ನು ನ್ಯಾಯಬದ್ಧಗೊಳಿಸಲಿದೆಯೆಂದು ಮೂಲಗಳು ತಿಳಿಸಿವೆ.
ಒಆರ್‌ಒಪಿ ಜಾರಿಗೊಳಿಸಬೇಕೆಂಬ ಮಾಜಿ ಯೋಧರ ಒತ್ತಡಕ್ಕೆ ಮಣಿದಿದೆಯೆಂದು ತೋರಿಸಿಕೊಳ್ಳಲು ಸರಕಾರ ಬಯಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ‘ಸಮಯ ಬಂದಾಗ’ ಈ ಸಂಬಂಧ ಘೋಷಣೆಯೊಂದನ್ನು ಮಾಡುವರೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಗುರುವಾರ ಹೇಳಿದ್ದರು.
ಜಂತರ್-ಮಂತರ್‌ನಲ್ಲಿ ಹೆಚ್ಚು-ಹೆಚ್ಚು ಮಾಜಿ ಯೋಧರು ಉಪವಾಸ ಮುಷ್ಕರದಲ್ಲಿ ಸೇರುತ್ತಿರುವುದರಿಂದ ಸರಕಾರ ಚಿಂತೆಗೊಳಗಾಗಿದೆ. ಪ್ರಧಾನಿ ಮೋದಿ, ಆ.15ರ ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ಒಆರ್‌ಒಪಿ ಘೋಷಿಸಲು ವಿಫಲರಾದ ಬಳಿಕ ಹಿರಿಯ ಯೋಧರು ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.

Write A Comment