ಹೊಸದಿಲ್ಲಿ, ಆ.28: 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಯೋಧರ ಸಹಿತ ನೂರಾರು ಹಿರಿಯ ಸೈನಿಕರು ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿಯಲ್ಲಿ ನಡೆದ ಯುದ್ಧದ 50ನೆ ವರ್ಷಾಚರಣೆಯ ಅಧಿಕೃತ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ.
ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮೂರೂ ಸೇನಾ ವಿಭಾಗಗಳ ದಂಡನಾಯಕರು ಭಾಗವಹಿಸಿದ್ದರು.
ಸರಕಾರಿ ಸಮಾರಂಭಕ್ಕೆ ಹಾಜರಾಗುವ ಬದಲು, ಮಾಜಿ ಯೋಧರು ಹಾಗೂ ಹುತಾತ್ಮ ಯೋಧರ ಪತ್ನಿಯರು ಜಂತರ್-ಮಂತರ್‌ನಲ್ಲಿ ತಮ್ಮದೇ ಆದ ಸಮಾರಂಭವನ್ನು ಆಯೋಜಿಸಿ, ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು. ಮಾಜಿ ಸೈನಿಕರು ಸಮಾನ ಶ್ರೇಣಿ ಸಮಾನ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ 75 ದಿನಗಳಿಂದ ಚಳವಳಿ ನಡೆಸುತ್ತಿದ್ದು, ಕೆಲವರು ಆಮರಣ ಉಪವಾಸ ನಿರತರಾಗಿದ್ದಾರೆ.
ವಿಂಗ್ ಕಮಾಂಡರ್(ನಿವೃತ್ತ) ವಿನೋದ್ ನೆಬ್ ಹಾಗೂ ಕರ್ನಲ್(ನಿವೃತ್ತ) ವಿ.ಎನ್. ಥಾಪರ್ ಪ್ರತಿಭಟನಾ ನಿರತರಲ್ಲಿ ಸೇರಿದ್ದಾರೆ. ಸರಕಾರದ ಮೇಲೆ ಅಸಮಾಧಾನಗೊಂಡಿರುವ ಅವರು, 1965ರ ಯುದ್ಧದ ಅಧಿಕೃತ ಆಚರಣೆಯನ್ನು, ಯುದ್ಧದಲ್ಲಿ ಹೋರಾಡಿದ್ದವರಿಗೆ ಮಾಡಿದ ಅಪಮಾನವೆಂದು ವ್ಯಾಖ್ಯಾನಿಸಿದ್ದಾರೆ. 1965ರ ಯುದ್ಧದಲ್ಲಿ ಹೋರಾಡಿದ್ದವರು ಇಲ್ಲಿ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ಅವಸ್ಥೆಪಡುತ್ತಿರುವಾಗ, ಯುದ್ಧದ 50ನೆ ವರ್ಷಾಚರಣೆಯು ಹಿರಿಯ ಯೋಧರಿಗೆ ಮಾಡಿರುವ ಅವಮಾನವಾಗಿದೆಯೆಂದು ಕ. ಥಾಪರ್ ಆರೋಪಿಸಿದ್ದಾರೆ.
ನೆಬ್, 1963ರಲ್ಲಿ ಐಎಎಫ್‌ನ ನಂ.27 ಸ್ಕ್ವಾಡ್ರನ್‌ಗೆ(ಫ್ಲೇಮಿಂಗ್ ಆ್ಯರೋಸ್) ಸೇರಿದ್ದರು. ಅದಾಗಿ ಎರಡೇ ವರ್ಷಗಳಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ನಡೆದಿತ್ತು. ಯುದ್ಧದಲ್ಲಿ ಅವರು ಹಂಟರ್ ಜೆಟ್ ಒಂದನ್ನು ಚಲಾಯಿಸುತ್ತ ಪಾಕಿಸ್ತಾನದ ಎರಡು ಎಫ್-86 ಸೇಬರ್ ವಿಮಾನಗಳನ್ನು ಗುಂಡು ಹಾರಿಸಿ ನೆಲಕ್ಕುರುಳಿಸಿದ್ದರು. ನೆಬ್‌ಗೆ ವೀರಚಕ್ರ ಪ್ರಶಸ್ತಿ ಲಭಿಸಿದೆ.
ಕ.ವಿ.ಎನ್. ಥಾಪರ್, 1962ರ ಭಾರತ-ಚೀನ ಯುದ್ಧದಲ್ಲಿ ಭಾಗವಹಿಸಿದ್ದರು. ಅಲ್ಲದೆ, 1965 ಹಾಗೂ 71ರ ಯುದ್ಧಗಳಲ್ಲೂ ಹೋರಾಡಿದ್ದರು.
ರಾಷ್ಟ್ರೀಯ