ರಾಷ್ಟ್ರೀಯ

ಪಟೇಲ್ ಮೀಸಲಾತಿ ಚಳವಳಿ: ಪೊಲೀಸ್ ದೌರ್ಜನ್ಯದ ಬಗ್ಗೆ ವರದಿ ಕೇಳಿದ ಹೈಕೋರ್ಟ್

Pinterest LinkedIn Tumblr

gujarathಅಹ್ಮದಾಬಾದ್, ಆ.27: ಗುಜರಾತಿನ ಪಟೇಲ್ (ಪಾಟಿದಾರ್) ಸಮುದಾಯದ ಮೀಸಲಾತಿ ದಂಗೆಯ ವೇಳೆ ನಡೆದಿದ್ದ ಪೊಲೀಸ್ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಹೈಕೋರ್ಟ್, ಸೋಲಾದಲ್ಲಿ ಪೊಲೀಸರು ಖಾಸಗಿ ಆಸ್ತಿಗಳನ್ನು ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿ ತನಿಖೆ ಕೈಗೊಂಡು 2 ವಾರಗಳೊಳಗೆ ವರದಿ ನೀಡುವಂತೆ ನಗರದ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.
ವಕೀಲ ವಿರಾಟ್ ಪೋಪ್ತಲ್ ಎಂಬವರು ದಾಖಲಿಸಿದ್ದ ದೂರೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ಪೊಲೀಸರು ಅಂತಹ ಸೂಕ್ಷ್ಮ ಪರಿಸ್ಥಿತಿಯನ್ನು ಈ ರೀತಿ ನಿಭಾಯಿಸಲಾಗದು. ಅಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದಿದೆ. ಅರ್ಜಿದಾರ ಪೋಪ್ತಲ್‌ರ ಕಾರನ್ನು ಪೊಲೀಸರು ಹಾನಿಗೊಳಿಸಿದ್ದರು.
ಸೋಲಾದ ಆಸ್ಥಾ ಬಂಗಲೆಗಳ, ಪೋಪ್ತಲ್ ಹಾಗೂ ಅವರ ನೆರೆಮನೆಯವರ ಆಸ್ತಿಗಳನ್ನು ದಂಗೆಯ ವೇಳೆ ಪೊಲೀಸರು ಹಾನಿಗೊಳಿಸಿದ್ದರೆಂದು ಆರೋಪಿಸಲಾಗಿದೆ. ಉದ್ರಿಕ್ತ ಗುಂಪೊಂದು ಸಾರ್ವಜನಿಕ ಆಸ್ತಿ ಹಾಗೂ ಒಂದು ಪೊಲೀಸ್ ಚೌಕಿಯನ್ನು ಹಾನಿಗೊಳಿಸಿದ ಬಳಿಕ ಪೊಲೀಸರ ಈ ಅತಿರೇಕ ನಡೆದಿದೆಯೆನ್ನಲಾಗಿದೆ. ಈ ಬಗ್ಗೆ ಎಫ್‌ಐಆರ್ ಒಂದನ್ನು ದಾಖಲಿಸಿ ತನಿಖೆ ನಡೆಸಬೇಕು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆಸ್ತಿ ಹಾನಿಗೊಳಿಸಿರುವುದಕ್ಕೆ ಪರಿಹಾರ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವ ಸಿಸಿಟಿವಿ ದೃಶ್ಯಾವಳಿ ಪೊಲೀಸರೂ ಈ ಕೃತ್ಯದಲ್ಲಿ ಭಾಗವಹಿಸಿರುವುದನ್ನು ತೋರಿಸಿದೆಯೆಂದು ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದೆ. ಪೊಲೀಸರು ಖಾಸಗಿ ಕಾರುಗಳು ಹಾಗೂ ಆಸ್ತಿಗಳನ್ನು ಹಾನಿಗೊಳಿಸಿದ್ದಾರೆಯೇ ಎಂದು ನ್ಯಾಯಮೂರ್ತಿ ರಾಜ್ಯ ಸರಕಾರವನ್ನು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಪ್ರಾಸಿಕ್ಯೂಟರ್, ಉನ್ನತ ಅಧಿಕಾರಿಗಳಿಗೆ ಈ ಘಟನೆಯ ಬಗ್ಗೆ ತಿಳಿದಿಲ್ಲ ಎಂದರು.
ಇದಕ್ಕೆ ನ್ಯಾಯಾಲಯ, ತಪ್ಪಿತಸ್ಥ ಪೊಲೀಸರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಹಾಗೂ ಅವರ ಅಮಾನತಿಗೆ ಯಾಕೆ ಆದೇಶ ನೀಡಿಲ್ಲವೆಂದು ಪ್ರಶ್ನಿಸಿತು. ಆಗ ಯಾವುದೇ ಕ್ರಮ ಕೈಗೊಳ್ಳಲಾಗದಂತಹ ಪರಿಸ್ಥಿತಿಯಿತ್ತೆಂದು ಅದಕ್ಕೆ ಪ್ರಾಸಿಕ್ಯೂಟರ್ ಉತ್ತರಿಸಿದರು.
ಪೊಲೀಸರು ಮಾಡಿರುವ ಆಸ್ತಿ ಹಾನಿಯ ಬಗ್ಗೆ ಆಸ್ಥಾ ಬಂಗಲೆಗಳ ಇತರ ನಿವಾಸಿಗಳು ದಾಖಲಿಸಿದ ಅಫಿದಾವಿತ್‌ಗಳನ್ನು ನ್ಯಾಯಾಲಯ ಅಂಗೀಕರಿಸಿತು.
ಪೊಲೀಸ್ ಹಿಂಸಾಚಾರದ ಕುರಿತಾದ ಸಿಸಿಟಿವಿ ದೃಶ್ಯಾವಳಿಯನ್ನುಲ್ಲೇಖಿಸಿದ ನ್ಯಾ. ಪರ್ದಿವಾಲಾ ಇದು ಅತ್ಯಂತ ಕಳವಳಕಾರಿ. ಪೊಲೀಸರೇ ಈ ರೀತಿ ಮಾಡಿದರೆ, ದಂಗೆಕೋರರು ಹಾಗೂ ರಕ್ಷಕರ ಮಧ್ಯೆ ವ್ಯತ್ಯಾಸ ಎಲ್ಲಿ ಉಳಿಯುತ್ತದೆ ಜನರಿಗೆ ಯಾವ ಸಂದೇಶ ಹೋಗುತ್ತದೆ? ಎಂದು ಪ್ರಶ್ನಿಸಿದರು.
ಪೊಲೀಸರ ಮೇಲಿನ ಸಾರ್ವಜನಿಕರ ವಿಶ್ವಾಸ ಪುನಃಸ್ಥಾಪನೆಯಾಗುವಂತೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೈಕೋರ್ಟ್, ಉನ್ನತ ಅಧಿಕಾರಿಗಳಿಗೆ ಆದೇಶಿಸಿತು.
ಜಿಎಂಡಿಸಿ ಮೈದಾನದಲ್ಲಿ ಪಾಟಿದಾರ್ ಅನೀವಂತ್ ಆಂದೋಲನ್ ಸಮಿತಿಯ(ಪಿಎಎಎಸ್) ಬೆಂಬಲಿಗರ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಹಾಗೂ ಅದರ ಸಂಚಾಲಕ ಹಾರ್ದಿಕ್ ಪಟೇಲ್‌ರ ಬಂಧನದ ಕುರಿತು ಬುಧವಾರ ಮ್ಯಾಜಿಸ್ಟಿರಿಯಲ್ ನ್ಯಾಯಾಲಯವೊಂದು ತನಿಖೆಗೆ ಆದೇಶ ನೀಡಿತ್ತು.
ಪೊಲೀಸರ ಈ ಅತಿರೇಕದಿಂದಾಗಿ ರಾಜ್ಯಾದ್ಯಂತ ಹಿಂಸಾಚಾರ ನಡೆದು 24 ತಾಸುಗಳಲ್ಲಿ 9 ಮಂದಿಯ ಸಾವಿಗೆ ಕಾರಣವಾಯಿತೆಂಬ ನೆಲೆಯಲ್ಲಿ ಈ ತನಿಖೆಗೆ ಆದೇಶಿಸಲಾಗಿದೆ.

Write A Comment