ರಾಷ್ಟ್ರೀಯ

ಇಲ್ಲಿ ಈರುಳ್ಳಿ ಕೊಳ್ಳಲೂ ಗುರುತಿನ ಚೀಟಿ ಕಡ್ಡಾಯ!

Pinterest LinkedIn Tumblr

onionನವದೆಹಲಿ: ಅಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಸಿಸಿಟಿವಿಗಳು ನಿಮ್ಮನ್ನೇ ನೋಡುತ್ತಿರುತ್ತವೆ, ನೀವೇನಾದರೂ ಅಲ್ಲಿಗೆ ಬರಬೇಕೆಂದರೆ ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತಿನ ಚೀಟಿ ಹಿಡಿದುಕೊಂಡೇ ಬರಬೇಕು, ವಾಪಸ್ ಹೋಗುವ ಮೊದಲು ಕೈಬೆರಳಿಗೆ ಶಾಯಿಯ ಗುರುತು ಹಾಕಲಾಗುತ್ತದೆ! ಓಹೋ, ಹಾಗಾದರೆ ಅಲ್ಲಿ ವೋಟಿಂಗ್ ನಡೆಯುತ್ತಿರಬೇಕು ಎಂದು ನೀವು ಭಾವಿಸಿದರೆ ಖಂಡಿತಾ ಸುಳ್ಳು.

ಏಕೆಂದರೆ, ಇದು ಯಾವುದೇ ಮತಗಟ್ಟೆಯ ದೃಶ್ಯವಲ್ಲ. ಹೈದರಾಬಾದ್‍ನ ಈರುಳ್ಳಿ ಮಾರುಕಟ್ಟೆಯ ಚಿತ್ರಣ. ಹೌದು, ಈರುಳ್ಳಿ ಕೈಗೆಟುಕದ ದರದತ್ತ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್‍ನಲ್ಲಿ ಈರುಳ್ಳಿಗೆ ನೀಡಿರುವ ಹೈಸೆಕ್ಯೂರಿಟಿ ಇದು.

ಜನ ಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಆಂದ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಆರಂಭಿಸಿವೆ. ಎಲ್ಲೆಡೆ ಈರುಳ್ಳಿ ದರ ಕೆಜಿಗೆ ರು.80 ಆಗಿರುವಾಗ ಈ ಸರ್ಕಾರಗಳು ಮಾತ್ರ ಕೆಜಿಗೆ ರು. 20ರಂತೆ ಮಾರಾಟ ಮಾಡುತ್ತಿವೆ.

ಇಲ್ಲೂ ಜನ ಗೋಲ್‍ಮಾಲ್ ಮಾಡೋದು ಬೇಡ ಎಂದು ಪ್ರತಿಯೊಬ್ಬರಿಗೆ ರು. 2 ಕೆಜಿ ಈರುಳ್ಳಿ ಮಾತ್ರ ನೀಡಲಾಗುತ್ತಿದೆ. ಮಾರ್ಕೆಟ್‍ಗೆ ಬರುವ ಪ್ರತಿಯೊಬ್ಬನೂ ಸರ್ಕಾರಿ ಐಡಿ ಪ್ರೂಫ್ ತೋರಿಸಿ, ಬೆರಳಿಗೆ ಶಾಯಿ ಹಾಕಿಸಿಕೊಂಡ ಬಳಿಕವೇ ಈರುಳ್ಳಿ ನೀಡಲಾಗುತ್ತದೆ. ಅಂತೂ ಇಲ್ಲಿನ ಜನರಿಗೆ ಈರುಳ್ಳಿ ಕೊಳ್ಳಲೂ `ಆಧಾರ್ ಕಡ್ಡಾಯ’ ಎಂಬ ಸ್ಥಿತಿ.

ಮಹಾರಾಷ್ಟ್ರದಲ್ಲಿ ಇಳಿಮುಖ: ಗಗನಕ್ಕೇರುತ್ತಿರುವ ಈರುಳ್ಳಿ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ ಈರುಳ್ಳಿ ದರ ಸ್ವಲ್ಪ ಮಟ್ಟಿಗೆ ಕುಸಿದಿದೆ.

ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಸಲ್‍ಗಾಂವ್‍ನಲ್ಲಿ ಮಂಗಳವಾರ ಈರುಳ್ಳಿಯ ಸಗಟು ದರ ಕೆಜಿಗೆ ರು. 48.5ಕ್ಕಿಳಿದಿದೆ. ಕರ್ನಾಟಕ ಮತ್ತು ಆಂಧ್ರದಿಂದ ಹೊಸ ಬೆಳೆ ಮಾರುಕಟ್ಟೆಗೆ ಆಗಮಿಸಿದ್ದು, ಈರುಳ್ಳಿ ರಫ್ತಿಗೆ ಕಡಿವಾಣ ಬಿದ್ದಿದ್ದು ಮತ್ತು ಕಾಳಸಂತೆಕೋರರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇ ದರ ಇಳಿಕೆಗೆ ಕಾರಣ. ಹೀಗಿದ್ದಾಗ್ಯೂ, ದೇಶದಲ್ಲಿ ಈರುಳ್ಳಿ ಚಿಲ್ಲರೆ ದರ ಮಾತ್ರ ಕೆಜಿಗೆ ರು. 80 ಆಗಿಯೇ ಮುಂದುವರಿದಿದೆ. ಇದೇ ವೇಳೆ, ಛತ್ತೀಸ್‍ಗಡದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ 636 ಕ್ವಿಂಟಲ್ ಈರುಳ್ಳಿ ಜಪ್ತಿ ಮಾಡಲಾಗಿದೆ.

Write A Comment