ಹೊಸದಿಲ್ಲಿ, ಆ.26: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಹಾರಕ್ಕಾಗಿ ಘೋಷಿಸಿರುವ ರೂ. 1.25 ಲಕ್ಷ ಕೋಟಿ ರೂ. ಪ್ಯಾಕೇಜನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಪ್ರಚಾರದ ಪ್ಯಾಕೇಜ್’ ಹಾಗೂ ಹಳೆಯ ಯೋಜನೆಗಳು ಮತ್ತು ಈ ಹಿಂದೆ ಘೋಷಣೆಯಾಗಿ ಮುಂದುವರಿಯುತ್ತಿರುವ ಯೋಜನೆಗಳ ‘ಮರು ಪ್ಯಾಕೇಜಿಂಗ್’ ಎಂದು ಟೀಕಿಸಿದ್ದಾರೆ.
ರೂ. 1.25 ಲಕ್ಷ ಕೋಟಿ ರೂ.ಗಳಲ್ಲಿ 1.08 ಲಕ್ಷ ಕೋಟಿ ರೂ. ಕೇವಲ ಹಳೆಯ ಯೋಜನೆಗಳು ಹಾಗೂ ಹಿಂದೆ ಘೋಷಿತವಾಗಿ ಕಾರ್ಯಗತಗೊಳ್ಳುತ್ತಿರುವ ಯೋಜನೆಗಳ ಮರು ಪ್ಯಾಕೇಜಿಂಗ್ ಹಾಗೂ ಮೀಸಲುಗಳಾಗಿವೆಯೆಂದು ಅವರು ಟ್ವೀಟಿಸಿದ್ದಾರೆ.
ನಿತೀಶ್, ಪ್ಯಾಕೇಜನ್ನು ಬಹಿರಂಗಪಡಿಸಲು ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸಿದ್ದಾರೆ. ಅವರು ಅದನ್ನು ಹಲವು ಭಾಗಗಳಾಗಿ ಒಡೆದು, ಅದು ಬಿಹಾರದ ಜನತೆಗೆ ಅಜ್ಜಿ ಕತೆಯನ್ನು ವಿವರಿಸುವ ಪ್ರಯತ್ನವೆಂದು ಪ್ಯಾಕೇಜ್‌ನ್ನು ವ್ಯಾಖ್ಯಾನಿಸಿದ್ದಾರೆ. ರೂ. 6 ಸಾವಿರ ಕೋಟಿ ರೂ. ವಾಸ್ತವವಾಗಿ ನೆಲದಲ್ಲಿ ಕಾಣಿಸಿಕೊಳ್ಳದ ಭ್ರಾಂತಿಯ ಯೋಜನೆಗಳಿಗಾಗಿವೆ. ರೂ. 1.25 ಲಕ್ಷ ಕೋಟಿ ರೂ.ಗಳಲ್ಲಿ ಕೇವಲ ರೂ. 10,500 ಕೋಟಿ ರೂ.ಗಳನ್ನು ಹೆಚ್ಚುವರಿ ಲಾಭವೆಂದು ಕರೆಯಬಹುದಾಗಿದೆಯೆಂದು ನಿತೀಶ್ ಹೇಳಿದ್ದಾರೆ.