ಹೊಸದಿಲ್ಲಿ: ಶೀನಾ ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾರನ್ನು ಕೊಲ್ಕತ್ತಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ನಡೆದ ಕೊಲೆಯ ಆರೋಪಿಗಳು ಬಂಧನವಾದ ದಿನವೊಂದರಲ್ಲಿಯೇ, ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಇಂದ್ರಾಣಿ ತಂಗಿಯೆಂದು ಭಾವಿಸಲಾಗಿದ್ದ ಶೀನಾ, ಆಕೆಯ ಮಗಳು ಎಂಬುವುದು ಬಹಿರಂಗಗೊಂಡ ಕೆಲ ಹೊತ್ತಿನಲ್ಲಿಯೇ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಲಾಗಿದೆ.
‘ಇಂಥದ್ದೊಂದು ಅಪರಾಧದ ಊಹೆಯೂ ಇರಲಿಲ್ಲ. ನನ್ನ ಹೆಂಡತಿಯನ್ನು ಅಪಾರ ನಂಬಿದ್ದೆ. ಅವಳಿಗಾಗಿ ನನ್ನ ಮಗನನ್ನೂ ದೂರ ಮಾಡಿಕೊಂಡಿದ್ದೇನೆ. ಅತೀವ ಶಾಕ್‌ಗೆ ಒಳಗಾಗಿದ್ದರೂ ಪ್ರಕರಣದ ತನಿಖೆಗೆ ಸಹಕರಿಸುವೆ,’ ಎಂದು ಇಂದ್ರಾಣಿ ಪತಿ, ಸ್ಟಾರ್ ಇಂಡಿಯಾ ಸಿಇಒ ಪೀಟರ್ ಮುಖರ್ಜಿ ಹೇಳಿದ್ದಾರೆ.
‘ಇಷ್ಟು ವರ್ಷಗಳ ಕಾಲ ಇಂದ್ರಾಣಿ ತಂಗಿ, ತಮ್ಮ ಎಂದು ಕೊಂಡವರು ಇದೀಗ ಆಕೆ ಮಕ್ಕಳು ಎನ್ನಲಾಗುತ್ತಿದೆ. ಅವಳ ಒಂದು ಮದುವೆ ಬಗ್ಗೆ ನನಗೆ ಗೊತ್ತೇ ವಿನಾ ಇತರೆ ಸಂಬಂಧಗಳ ಬಗ್ಗೆ ಗೊತ್ತಿರಲಿಲ್ಲ. ಅನೇಕ ಹೊಸ ಹೊಸ ವಿಷಯಗಳು ಗೊತ್ತಾಗುತ್ತಿದ್ದು, ಎಲ್ಲವೂ ಹೊಸತು ಎನಿಸುತ್ತಿದೆ,’ ಎಂದು ಪೀಟರ್ ಹೇಳಿದ್ದಾರೆ.
‘ಶೀನಾ ನಾಪತ್ತೆಯಾಗಿದ್ದ ವಿಷಯವೂ ನನಗೆ ಈಗಲೇ ಗೊತ್ತಾಗಿದ್ದು. ಆಕೆ ಅಮೆರಿಕಕ್ಕೆ ಹೋಗಿದ್ದಾಳೆ ಎನ್ನುತ್ತಿದ್ದಳು. ನಾನು ಫೇಸ್‌ಬುಕ್‌ನಲ್ಲಿ ಇಲ್ಲದೇ, ಹೋದರೂ ಆಕೆ ಲಾಸ್ ಏಂಜಲೀಸ್‌ನಲ್ಲಿರುವ ಪೋಟೋಗಳನ್ನು ತೋರಿಸಲಾಗಿತ್ತು. ನನ್ನ ಹತ್ತಿರ ಆಕೆಯ ಕಾಂಟ್ಯಾಕ್ಟ್ ನಂಬರ್ ಇಲ್ಲ. ‘ಏನೋ ತಪ್ಪಾಗಿದೆ,’ ಎಂದು ನನ್ನ ಮಗ ಹೇಳುತ್ತಿದ್ದ. ಆದರೆ, ಅವರ ತಂದೆ-ತಾಯಿ ಆಸೆಯಂತೆ ಅವಳು ಅಮೆರಿಕಕ್ಕೆ ಹೋಗಿರಬಹುದು, ಎಂದಿದ್ದೆ. ಅಲ್ಲಿಂದಲೂ ನಮ್ಮಿಬ್ಬರ ನಡುವೆ ಮಾತುಕತೆಯೇ ನಡೆದಿಲ್ಲ,’ ಎಂದಿದ್ದಾರೆ.