ನವದೆಹಲಿ: ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ನಾವೇದ್ ಯಾಕುಬ್ ಜೊತೆಗೆ ಗುರುತಿಸಿಕೊಂಡಿರುವ ಇಬ್ಬರು ಲಷ್ಕರ್-ಇ -ತೋಯಿಬಾ ಉಗ್ರಗಾಮಿಗಳ ಪತ್ತೆಗೆ ಅವರ ರೇಖಾಚಿತ್ರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಛೆ ಮಂಗಳವಾರ ಬಿಡುಗಡೆ ಮಾಡಿದೆ.
ತನಿಖಾ ಸಂಸ್ಥೆ ಅವರ ಹುಡುಕಾಟಕ್ಕೆ ವ್ಯಾಪಕ ಬಲೆ ಬೀಸಿದ್ದು, ಅವರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.
ಜಮ್ಮು-ಕಾಶ್ಮೀರದ ಉದಂಪುರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಯೋಧರ ಮೇಲೆ ದಾಳಿ ನಡೆಸುತ್ತಿದ್ದ ವೇಳೆ ಸೆರೆಸಿಕ್ಕಿದ ನಾವೇದ್ ಯಾಕುಬ್ ನನ್ನು ಇಂದು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇವನ ಜೊತೆ ಇದ್ದ ಇನ್ನಿಬ್ಬರು ಉಗ್ರರಾದ ಸುಮಾರು 40 ವರ್ಷ ವಯಸ್ಸಿನ ಮೊಹಮ್ಮದ್ ಬಾಯಿ ಮತ್ತು ಸುಮಾರು 18 ವರ್ಷದ ಅಬು ಒಕಾಶಾ ತಪ್ಪಿಸಿಕೊಂಡಿದ್ದರು.
ತನಿಖೆ ವೇಳೆ ನಾವೇದ್ ಅಸಮಂಜಸ ಹೇಳಿಕೆ ನೀಡುತ್ತಿರುವುದರಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಪಾಕಿಸ್ತಾನದ ಫೈಸ್ಲಾಬಾದ್ ಮೂಲದ ನಾವೇದ್ ಯಾಕುಬ್ ನು ಮೊನ್ನೆ ಆಗಸ್ಟ್ 5ರಂದು ಉದಂಪುರ್ ನಲ್ಲಿ ಗಡಿ ಭದ್ರತಾ ಯೋಧರ ಬಸ್ಸಿನ ಮೇಲೆ ದಾಳಿ ನಡೆಸಿ ಇಬ್ಬರು ಯೋಧರ ಸಾವಿಗೆ ಕಾರಣನಾಗಿದ್ದ. ಈತನನ್ನು ನಿನ್ನೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ಮುಂದೆ ಬಿಗಿ ಭದ್ರತೆ ನಡುವೆ ಹಾಜರುಪಡಿಸಲಾಗಿತ್ತು.
ನಾವೇದ್ ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವಂತೆ ತನಿಖಾ ಸಂಸ್ಥೆ ಮಾಡಿಕೊಂಡ ಮನವಿಗೆ ಆತನನ್ನು ಖಾಸಗಿಯಾಗಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಅಮರ್ ನಾಥ್ ಅವಕಾಶ ನೀಡಿದರು.