ದುಬೈ, ಆ. 17: ಪ್ರಧಾನಿ ನರೇಂದ್ರ ಮೋದಿ ಇಂದು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್‌ರನ್ನು ಭೇಟಿಯಾದರು. ವಿಭಿನ್ನ ಕ್ಷೇತ್ರಗಳಲ್ಲಿ ಹೊಂದಿರುವ ಆರ್ಥಿಕ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.
ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುವ ವಿಧಾನಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಅದೇ ವೇಳೆ, ಭಾರತದಲ್ಲಿನ ಹೂಡಿಕೆ ವಾತಾವರಣದ ಬಗ್ಗೆ ಮೋದಿ ಯುಎಇ ನಾಯಕನಿಗೆ ವಿವರಣೆ ನೀಡಿದರು.
ತನ್ನ ಯುಎಇ ಪ್ರವಾಸದ ಎರಡನೆ ಹಂತವಾಗಿ ಮೋದಿ ಅಬುಧಾಬಿಯಿಂದ ಇಲ್ಲಿಗೆ ಆಗಮಿಸಿದರು. ದುಬೈಯ ಆಡಳಿತಗಾರನೂ ಆಗಿರುವ ಶೇಖ್ ಮುಹಮ್ಮದ್ ಮೋದಿಯನ್ನು ಹಾರ್ದಿಕ ವಾಗಿ ಬರಮಾಡಿ ಕೊಂಡರು.
ಯುಎಇಯಲ್ಲಿ ಭಾರತೀಯರೇ ಪ್ರಮುಖ ಹೂಡಿಕೆದಾರರಾಗಿದ್ದಾರೆ. ಯುಎಇಯಲ್ಲಿ ಉತ್ಪಾದನೆ ಯಾಗುತ್ತಿರುವ ವಸ್ತುಗಳಿಗೆ ಭಾರತ ಪ್ರಮುಖ ಮಾರು ಕಟ್ಟೆಯಾಗಿದೆ.
1970ರ ದಶಕದಲ್ಲಿ 18 ಕೋಟಿ ಡಾಲರ್‌ಗಳಷ್ಟಿದ್ದ ಭಾರತ-ಯುಎಇ ವಾರ್ಷಿಕ ವಾಣಿಜ್ಯ ವ್ಯವಹಾರ, ಈಗ ಸುಮಾರು 6,000 ಕೋಟಿ ಡಾಲರ್‌ಗೆ ಹಿಗ್ಗಿದೆ. ಯುಎಇಯಿಂದ ಭಾರತ ಪ್ರಮುಖವಾಗಿ ಆಮದು ಮಾಡಿಕೊಳ್ಳುವ ಉತ್ಪನ್ನಗಳೆಂದರೆ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಅಮೂಲ್ಯ ಲೋಹಗಳು, ಹರಳುಗಳು, ಮುತ್ತುಗಳು, ಆಭರಣ, ಖನಿಜಗಳು ಮತ್ತು ರಾಸಾಯನಿಕಗಳು.