ಗಲ್ಫ್

ಭಾರತದಲ್ಲಿ ಲಕ್ಷ ಕೋಟಿ ಡಾಲರ್ ಹೂಡಿಕೆಗೆ ಅವಕಾಶ: ಯುಎಇ ಹೂಡಿಕೆದಾರರ ಸಮಾವೇಶದಲ್ಲಿ ಮೋದಿ

Pinterest LinkedIn Tumblr

22

ಅಬುಧಾಬಿ, ಆ.18: ಭಾರತದಲ್ಲಿ ಒಂದು ಲಕ್ಷ ಕೋಟಿ ಡಾಲರ್ ತಕ್ಷಣದ ಹೂಡಿಕೆಗೆ ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಇಲ್ಲಿನ ಮಸ್ದರ್ ನಗರದಲ್ಲಿ ಹೂಡಿಕೆದಾರರ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಹಿಂದಿನ ಸರಕಾರಗಳು ಮಾಡಿರುವ ತಪ್ಪನ್ನು ತನ್ನ ಸರಕಾರ ಸರಿಪಡಿಸಬೇಕಾಗಿದೆ ಎಂದರು. ಹಿಂದಿನ ಸರಕಾರಗಳ ಅನಿರ್ಧಾರ ಮತ್ತು ನಿರ್ಲಕ್ಷಗಳಿಂದ ನಿಂತುಹೋಗಿರುವ ಪ್ರಕ್ರಿಯೆಗಳಿಗೆ ಮರು ಚಾಲನೆ ನೀಡುವುದು ತನ್ನ ತಕ್ಷಣದ ಆದ್ಯತೆಯಾಗಿದೆ ಎಂದರು.

ಭಾರತ ಮತ್ತು ಯುಎಇ ನಡುವೆ 700 ವಿಮಾನಗಳು ಹಾರಾಡುತ್ತಿದ್ದರೂ, ಭಾರತೀಯ ಪ್ರಧಾನಿಯೊಬ್ಬ ಯುಎಇಗೆ ಭೇಟಿ ನೀಡಲು 34 ವರ್ಷಗಳು ಬೇಕಾಯಿತು ಎಂದರು. ‘‘ಇಂತಹ ವಿಳಂಬ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ’’ ಎಂದು ಅವರು ನುಡಿದರು.

ಇದಕ್ಕೂ ಮುಂಚೆ 1981ರಲ್ಲಿ ಭಾರತೀಯ ಪ್ರಧಾನಿಯಾಗಿ ಇಂದಿರಾ ಗಾಂಧಿ ಯುಎಇಗೆ ಭೇಟಿ ನೀಡಿದ್ದರು.
ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ ಹಾಗೂ ಅದು ಅಗಾಧ ಅಭಿವೃದ್ಧಿ ಸಾಧ್ಯತೆಯನ್ನು ಹೊಂದಿದೆ ಎಂಬುದನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವ ಬ್ಯಾಂಕ್ ಮತ್ತು ಮೂಡಿಸ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳು ಒಪ್ಪಿ ಕೊಂಡಿವೆ ಎಂದು ಮೋದಿ ನುಡಿದರು.

ಯುಎಇಯ ಹೂಡಿಕೆದಾರರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ವಿಷಯ ನನ್ನ ಕಿವಿಗೆ ಬಿದ್ದಿದೆ ಎಂದು ಹೇಳಿದ ಮೋದಿ, ಈ ಸಮಸ್ಯೆಗಳನ್ನು ಸರಕಾರ ಬಗೆಹರಿಸುತ್ತಿದೆ ಎಂಬ ಭರವಸೆಯನ್ನು ನಾನು ಅವರಿಗೆ ನೀಡಲು ಬಯಸುತ್ತೇನೆ ಎಂದರು.

ಏಕ ಗವಾಕ್ಷಿ ಅನುಮೋದನೆಯಂಥ ಕೆಲವು ಕ್ರಮಗಳನ್ನು ತಾವು ಎದುರು ನೋಡುತ್ತಿರುವುದಾಗಿ ಹೂಡಿಕೆದಾರರು ಹೇಳಿದರು. ಭಾರತದಲ್ಲಿ ವ್ಯಾಪಾರ ಮಾಡಲು ತ್ರಾಸದಾಯಕ ಹಾಗೂ ಸಂಕೀರ್ಣ ಪ್ರಕ್ರಿಯೆಗಳು ಅಡ್ಡಿಯಾಗಿವೆ ಎಂದರು.

ಎಟಿಸಲಾಟ್ ಸಿಇಒ ಅಹ್ಮದ್ ಅಬ್ದುಲ್‌ಕರೀಂ ಜುಲ್ಫರ್, ಎಮಾರ್ ಪ್ರಾಪರ್ಟೀಸ್‌ನ ಅಧ್ಯಕ್ಷ ಮುಹಮ್ಮದ್ ಅಲಿ ಅಲ್ ಅಬ್ಬರ್ ಮುಂತಾದ ಯುಎಇ ಉದ್ಯಮ ವಲಯದ ದಿಗ್ಗಜರು ಸಮಾವೇಶದಲ್ಲಿ ಭಾಗವಹಿಸಿದ್ದರು.

Write A Comment