ನವದೆಹಲಿ: ವಿದ್ಯಾರ್ಥಿನಿಯರು ರಾತ್ರಿ ತಡವಾಗಿ ಹಾಸ್ಟೆಲ್ ಗೆ ಅಗಮಿಸುವುದಕ್ಕೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಸತಿ ನಿಲಯ ನಿರ್ಬಂಧ ವಿಧಿಸಿದೆ. ವಸತಿ ನಿಲಯದ ಆಡಳಿತ ಮಂಡಳಿ ನಿರ್ಧಾರಕ್ಕೆ ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದು ಲಿಂಗ ತಾರತಮ್ಯ ಹಾಗೂ ಪಕ್ಷಪಾತದ ನಿರ್ಣಯ ಎಂದು ಆರೋಪಿಸಿದ್ದಾರೆ.
ರಾತ್ರಿ ತಡವಾಗಿ ಬಂದರೆ ಪ್ರವೇಶ ನಿರಾಕರಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿದ್ಯಾರ್ಥಿನಿಯರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯವಿದ್ದಾಗ ವಿದ್ಯಾರ್ಥಿನಿಯರಿಗೆ ರಾತ್ರಿ ತಡವಾಗಿ ಹಾಸ್ಟೆಲ್ ಗೆ ಬರುವುದಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದೆ. ಹುಡುಗರಿಗೆ ಈ ರೀತಿ ಕಾಲಮಿತಿಯನ್ನು ವಿಧಿಸದೇ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಕಾಲಮಿತಿ ವಿಧಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಭದ್ರತಾ ದೃಷ್ಟಿಯಿಂದ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದ್ದೇ ಆದರೆ ಹುಡುಗರಿಗೇಕೆ ಅನ್ವಯವಾಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ.
ಸಂಶೋಧನೆ, ಹಾಗೂ ಪ್ರಾಜೆಕ್ಟ್ ಗಳಿಗೆ ಸಂಬಂಧಿಸಿದ ಸಭೆಗೆಳಿಗೆ ತೆರಳಿದರೆ 8 ಗಂಟೆಯೊಳಗೆ ವಾಪಸ್ ಬರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಆಡಳಿತ ಮಂಡಳಿಯ ಕೆಲವು ನಿರ್ಧಾರಗಳ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ಅತ್ಯಾಚಾರ ಮತ್ತು ಲಿಂಗಭೇದದ ವಿರುದ್ಧ ಅಭಿಯಾನ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು.