ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಯೋಧರಿಂದ ಎರಡನೇ ದಿನವಾದ ಇಂದೂ ಕೂಡ ದಾಳಿ ಮುಂದುವರಿದಿದೆ. 40 ವರ್ಷದ ಮಹಿಳೆ ಹಾಗೂ 12 ವರ್ಷದ ಬಾಲಕನೊಬ್ಬ ಕಳೆದ ರಾತ್ರಿ ಸಾವನ್ನಪ್ಪಿದ್ದು, ಇದುವರೆಗೆ 6 ಮಂದಿ ನಾಗರಿಕರು ಅಸುನೀಗಿ, 9 ಮಂದಿ ಗಾಯಗೊಂಡಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೇ ಪಾಕಿಸ್ತಾನ ಪಡೆಯಿಂದ ಆರಂಭಗೊಂಡ ದಾಳಿ ರಾತ್ರಿಯಿಡೀ ಮುಂದುವರಿಯಿತು. ಗಡಿಯ ಹಳ್ಳಿಗಳಲ್ಲಿ ವಾಸಿಸುತ್ತಿರುವ ನಾಗರಿಕರನ್ನು ಮನೆಯೊಳಗೆ ಇರುವಂತೆ ಸ್ಥಳೀಯ ಅಧಿಕಾರಿಗಳು ಸೂಚಿಸಿದ್ದಾರೆ.
ನಿನ್ನೆ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ನರೇಂದ್ರ ಮೋದಿಯವರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಯ ಮಾತುಗಳನ್ನಾಡಿದ್ದರು. ಆದರೂ ಕೂಡ ಸ್ವಲ್ಪ ಹೊತ್ತಿನಲ್ಲೇ ಪೂಂಚ್ ವಲಯದಲ್ಲಿ ಪಾಕಿಸ್ತಾನ ಯೋಧರು ಕದನ ವಿರಾಮ ಉಲ್ಲಂಘಿಸಿ ಯುದ್ಧ ಆರಂಭಿಸಿದರು. ದಾಳಿಯನ್ನು ನಮ್ಮ ಸೈನಿಕರು ಸಮರ್ಥವಾಗಿ ಎದುರಿಸಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಮನೀಶ್ ಮೆಹ್ತಾ ತಿಳಿಸಿದ್ದಾರೆ.
ಈ ತಿಂಗಳಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು ಇದು 32ನೇ ಸಲ ಮತ್ತು ಕಳೆದ ಎಂಟು ದಿನಗಳಿಂದ ಸತತವಾಗಿ ಕದನ ನಡೆಯುತ್ತಿದೆ.