ನವದೆಹಲಿ, ಆ.16- ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಲೋಕಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು ನನಗೆ ಆಘಾತವನ್ನುಂಟುಮಾಡಿದೆ ಎಂದು ಲೋಕಸಭೆ ಸ್ಪೀಕರ್ ಸುಮಿತ್ರ ಮಹಾಜನ್ ಹೇಳಿದ್ದಾರೆ.
ಸೋನಿಯಾಗಾಂಧಿಯವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದಾಗ ನನಗೆ ಇದ್ದಕ್ಕಿದ್ದಂತೆ ದಿಗ್ಭ್ರಾಂತಿಯಾಯಿತು. ಅವರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸಲು ಬಂದರು ಎಂಬುದು ನನಗೆ ತಿಳಿಯಲಿಲ್ಲ. ಸದನದಲ್ಲಿ ಕೋಲಾಹಲ ನಡೆಯುತ್ತಿದ್ದರಿಂದ ಯಾರು ಏನು ಹೇಳುತ್ತಿದ್ದಾರೆಂಬುದು ನನಗೆ ಅರ್ಥವಾಗಲಿಲ್ಲ. ಆದರೆ, ಸೋನಿಯಾಗಾಂಧಿ ಬಾವಿಗಿಳಿದಿದ್ದನ್ನು ಕಂಡು ಒಂದು ಕ್ಷಣ ನನಗೆ ದಿಗ್ಭ್ರಾಂತಿಯಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಸದನದಲ್ಲಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದರಿಂದ ಯಾರು ಏನು ಹೇಳುತ್ತಿದ್ದಾರೆಂಬುದು ನನಗೆ ತಿಳಿಯಲಿಲ್ಲ. ಎಂದೂ ಪ್ರತಿಭಟನೆ ನಡೆಸದ ಸೋನಿಯಾಗಾಂಧಿ ಅಂದು ಏಕೆ ಈ ರೀತಿ ಮಾಡಿದರು ಎಂಬುದು ನನಗೆ ಅರ್ಥವಾಗಲಿಲ್ಲ. ಕೆಲ ಸದಸ್ಯರು ಸದನದೊಳಗೆ ನಡೆದುಕೊಂಡ ರೀತಿ ಯಾರಿಗೂ ಕ್ಷೋಭೆ ತರುವುದಿಲ್ಲ ಎಂದು ಮಹಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಾನು ಯಾವಾಗಲೂ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದೆ. ಸುಗಮ ಕಲಾಪ ನಡೆಯಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಕಾಂಗ್ರೆಸ್ ಸದಸ್ಯರು ಕೆಲವು ಬಾರಿ ಸದನದಲ್ಲಿ ಅಸಂಸದೀಯ ಪದ ಬಳಸಿ ದುರ್ನಡತೆಯಿಂದ ನಡೆದುಕೊಂಡರು.
ಹೀಗಾಗಿ ನಾನು ಕಠಿಣ ಕ್ರಮ ತೆಗೆದುಕೊಳ್ಳಲೇಬೇಕಾಯಿತು. ಸಂಸದರನ್ನು ಅಮಾನತು ಮಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಐಪಿಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದರು. ಈ ವೇಳೆ ಸಂಸದರೊಬ್ಬರು ಈ ಹಣ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಗೆ ಬಂದಿದೆ ಎಂದು ಆರೋಪಿಸಿದರು.ಈ ಮಾತು ಅವರಿಗೆ ಸರಿಯಾಗಿ ಕೇಳಿಸಲಿಲ್ಲ. ಬಳಿಕ ಏನು ಹೇಳಿದೆ ಎಂದು ತಿಳಿದುಕೊಂಡು ಇದ್ದಕ್ಕಿದ್ದಂತೆ ಸದನದ ಬಾವಿಗಿಳಿದರು. ನಾನು ಕಾನೂನಿನ ಮಿತಿಯಡಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಸದನದಲ್ಲಿರುವ ಎಲ್ಲ ಸದಸ್ಯರೂ ಸರಿಸಮಾನರು. ಸಂಸತ್ತಿನ ಕಲಾಪಗಳು ಸುಸೂತ್ರವಾಗಿ ನಡೆಯಬೇಕು ಎಂಬುದಷ್ಟೇ ನನ್ನ ಆಶಯ ಎಂದಿದ್ದಾರೆ.