ಅಬುದಾಬಿ: ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್(ಅರಬ್ ರಾಷ್ಟ್ರ) ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಬುದಾಭಿ ತಲುಪಿದ್ದು, ಯುವರಾಜ ಶೇಖ್ ಮೊಹಮದ್ ಬಿನ್ ಝಾಯಿದ್ ಅಲ್-ನಹ್ಯಾನ್ ಭವ್ಯ ಸ್ವಾಗತ ಕೋರಿದರು.
ಏರ್ ಇಂಡಿಯಾ ವಿಮಾನದ ಮೂಲಕ ಅಬುದಾಭಿ ತಲುಪಿದ ಮೋದಿ ಅವರನ್ನು ಶೇಖ್ ಮೊಹಮದ್ ಝಾಯಿದ್ ಆತ್ಮಿಯವಾಗಿ ಬರ ಮಾಡಿಕೊಂಡರು. ಮೊದಲ ಹಂತವಾಗಿ ಯುವರಾಜನ ಜತೆ ಮೋದಿ ಅವರು ಮಾತುಕತೆ ನಡೆಸಲಿದ್ದಾರೆ. ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಜತೆ ಮಾತುಕತೆ ನಡೆಸಲಿದ್ದಾರೆ.
34 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಗಲ್ಫ್ ರಾಷ್ಟ್ರಕ್ಕೆ ನೀಡುತ್ತಿರುವುದು. ಇದಕ್ಕೆ ಮೊದಲು ಅಂದರೆ 1981ರಲ್ಲಿ ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಅವರ ಪ್ರವಾಸದ ವೇಳೆ ಭಾರತದ ಆರ್ಥಿಕತೆ, ಇಂಧನ ಮತ್ತು ರಕ್ಷಣಾ ಹಿತಾಸಕ್ತಿಗಳಿಗೆ, ವ್ಯಾಪಾರ ವೃದ್ಧಿ ಮತ್ತು ಭಯೋತ್ಪಾದನೆ ನಿಗ್ರಹ ಹಾಗೂ ಬಂಡವಾಳ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಜತೆ ಮಾತುಕತೆ ನಡೆಸಲಿದ್ದಾರೆ.