‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು’ ಎಂಬಂತೆ ಪಂಜಾಬ್ ನ ಅಮೃತಸರದಲ್ಲಿ 69ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಸಚಿವರೊಬ್ಬರು ತಲೆಕೆಳಗಾಗಿ ರಾಷ್ಟ್ರಧ್ವಜ ಹಾರಿಸಿದ್ದು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯ ಅವರು ಧ್ವಜಾರೋಹಣವನ್ನು ಮಾಡಿದ್ದು ಆದರೆ ಧ್ವಜ ತಲೆಕೆಳಗಾಗಿತ್ತು. ಅದನ್ನು ಗಮನಿಸದ ಸಚಿವ ಧ್ವಜಕ್ಕೆ ಸೆಲ್ಯೂಟ್ ಹೊಡೆದು ನೇರವಾಗಿ ಭಾಷಣ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಪತ್ರಕರ್ತನೊಬ್ಬ ಸಚಿವರನ್ನು ಈ ಕುರಿತು ಪ್ರಶ್ನಿಸಿದಾಗ ಕೆಂಡಾಮಂಡಲವಾದ ಸಚಿವರು ತಕ್ಷಣವೇ ಅಲ್ಲಿದ್ದ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದು ಘಟನೆ ಕುರಿತಂತೆ ವಿವರಣೆ ನೀಡುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಇನ್ಸ್ ಪೆಕ್ಟರ್ ಗುರ್ಮುಖ್ ಸಿಂಗ್ ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗುರಿಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದ್ದು ಸಚಿವರು ಮಾಡಿದ ಅವಾಂತರಕ್ಕೆ ಪೊಲೀಸರು ಕೆಲಸ ಕಳೆದುಕೊಂಡಂತಾಗಿದೆ.