1939-1954ರ ವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಜಪಾನ್, ಜರ್ಮನಿ ದೇಶಗಳು ನಿರ್ನಾಮವಾಗಿ ಹೋಗಿದ್ದವು. ಆದರೆ ಈ ಎರಡು ದೇಶಗಳೀಗ ಅಭಿವೃದ್ಧಿ ಹೊಂದಿ ನಾವು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿವೆ. 1947ರಲ್ಲಿ ಭಾರತ ಬ್ರಿಟಿಷರ ಕೈಯಿಂದ ಮುಕ್ತವಾಗಿ ಸ್ವತಂತ್ರಗೊಂಡಿತು. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು. ಸ್ವಾತಂತ್ರ್ಯ ಸಿಕ್ಕಿ 68 ವರುಷಗಳಾದರೂ ಭಾರತ ಇನ್ನೂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದೆ. ಜಪಾನ್ ಮತ್ತು ಜರ್ಮನಿ ಈ ಎರಡೂ ದೇಶಗಳು ಮಹಾಯುದ್ಧ ಪರಿಣಾಮವನ್ನೆದುರಿಸಿ ಥಟ್ಟನೆ ಮೈಕೊಡವಿ ನಿಂತವು. ಆದರೆ ಭಾರತ? ಭಾರತ ಇನ್ನೂ ಯಾಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ ಎಂಬುದಕ್ಕೆ ಇಲ್ಲಿದೆ 10 ಕಾರಣಗಳು.
ಭ್ರಷ್ಟಾಚಾರ
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ನಾವು ಹೆಮ್ಮೆ ಪಡುತ್ತೇವೆ. ಆದರೆ ನಮ್ಮನ್ನಾಳುವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಿ ನೋಡಿದರೂ ಲಂಚ ಬೇಡುವ ಕೈಗಳು ಕಾಣುತ್ತಿವೆ. ನಮ್ಮ ಕೆಲಸ ಬೇಗನೆ ಆಗಬೇಕೆಂದರೆ ಲಂಚ ನೀಡಲೇ ಬೇಕು, ಒಂದಷ್ಟು ಲಂಚ ಕೊಡುವುದರಲ್ಲಿ ತಪ್ಪೇನಿಲ್ಲ ಬಿಡಿ ಎಂದು ಹೇಳಿ ನಾವು ಲಂಚ ನೀಡಲು ತಯಾರಾಗುತ್ತೇವೆ. ಲಂಚ ಕೊಡುವ ಕೈಗಳು ಇರುವವರೆಗೆ ಲಂಚ ಪಡೆವ ಕೈಗಳು ಇದ್ದೇ ಇರುತ್ತವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲಿ ನಾವೆಷ್ಟು ಪಾಲು ವಹಿಸಿದ್ದೇವೆ?
ನ್ಯಾಯಾಂಗ ವ್ಯವಸ್ಥೆ
ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ಭರವಸೆ ಕಳೆದುಕೊಳ್ಳುತ್ತಿದ್ದೇವೆ. ಕಾನೂನು ಬರೀ ಕಾಗದದ ಹಾಳೆಯಲ್ಲಷ್ಟೇ ಪ್ರಬಲವಾಗಿದೆ. ಶಕ್ತಿಶಾಲಿಯಾದವನು ಯಾವುದೇ ತಪ್ಪು ಮಾಡಿದರೂ ಅವನು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾನೆ. ಅತ್ಯಾಚಾರಗಳು ಜಾಸ್ತಿಯಾಗುತ್ತಿದ್ದರೂ ಅತ್ಯಾಚಾರಿಗಳನ್ನು ಸದೆ ಬಡಿಯಲು ಯಾವುದೇ ಪ್ರಬಲ ಕಾನೂನು ಇಲ್ಲ. ಉಗ್ರರನ್ನು ಬಂಧಿಸಿದರೆ ಆತನಿಗೆ ರಾಜೋಪಚಾರ ನೀಡಿ ಸಂರಕ್ಷಿಸಲಾಗುತ್ತದೆ. ರಾಜಕಾರಣಿಗಳ, ಹಣದ ಬಲವೊಂದಿದ್ದರೆ ಎಂಥಾ ದೊಡ್ಡ ತಪ್ಪು ಮಾಡಿದರೂ ಆತ ಸಲೀಸಾಗಿ ಹೊರಗೆ ಬರಬಹುದು. ಹೀಗಿರುವಾಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾನ್ಯನಿಗೆ ನಂಬಿಕೆ ಬರುವುದಾದರೂ ಹೇಗೆ?
ಜಾತಿ ಭೇದ, ಕೋಮುವಾದ
ನಾವೆಲ್ಲರೂ ಒಂದೇ ಜಾತಿ ಒಂದೇ ಮತ ಒಂದೇ ಕುಲ ಎನ್ನುತ್ತೇವೆ. ಆದರೆ ನಿಜವಾಗಿಯೂ ಭಾರತದ ಸ್ಥಿತಿ ಹೀಗೆ ಇದೆಯಾ? ಪ್ರತಿಯೊಬ್ಬನಿಗೂ ಧರ್ಮ ಇದೆ, ಆ ಧರ್ಮದಲ್ಲಿ ಹಲವಾರು ಜಾತಿ, ಉಪಜಾತಿಗಳಿವೆ. ಮನುಷ್ಯನ ಭಾಷೆ, ಜಾತಿ, ತ್ವಚೆಯ ಬಣ್ಣವನ್ನು ನೋಡಿ ಭೇದ ಮಾಡಲಾಗುತ್ತದೆ. ಜಾತಿಗಳಲ್ಲಿ ಮೇಲು ಜಾತಿ ಕೀಳು ಜಾತಿ ಎಂಬ ವಿಂಗಡಣೆ ಬೇರೆ. ದೇವಾಲಯಗಳಲ್ಲಿಯೂ ಜಾತಿ ಬೇಧ, ಪಂಕ್ತಿ ಬೇಧ!! ಕೋಮವಾದದ ಬೆಂಕಿ ಅದೆಷ್ಟೋ ಜನರನ್ನು ಬಲಿ ತೆಗೆದುಕೊಂಡಿದೆ. ವೈವಿಧ್ಯತೆಯಲ್ಲಿ ಏಕತೆ ಎಂದು ಹೇಳುತ್ತಿದ್ದರೂ ಜಾತಿ ಬೇಧದ ಗೆರೆ ಇನ್ನೂ ಅಳಿಸಿ ಹೋಗಿಲ್ಲ. ಜಾತಿ ನೋಡಿ ಮಣೆ ಹಾಕುವ ಸಂಕುಚಿತ ಬುದ್ಧಿಯನ್ನು ಬಿಟ್ಟು ನಾವೆಲ್ಲರೂ ಮನುಷ್ಯ ಜಾತಿ, ಮಾನವೀಯತೆಯೇ ನಮ್ಮ ಧರ್ಮ ಎಂದು ಹೇಳುವುದು ಯಾವಾಗ?
ಜವಾಬ್ದಾರಿ ಮರೆತ ಮಾಧ್ಯಮಗಳು
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಮಾಧ್ಯಮಗಳು ಗುರುತಿಸಲ್ಪಡುತ್ತಿವೆ. ಆದರೆ ಇಂದು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಟಿಆರ್‌ಪಿ ಎಂಬ ಮಾಪಕದ ಹಿಂದೆ ಬಿದ್ದು, ಇದ್ದ ಬದ್ದ ಸುದ್ದಿಗಳೆಲ್ಲವೂ ಸ್ಫೋಟಕ ಸುದ್ದಿಗಳಾಗುತ್ತಿವೆ. ಕೆಲವೊಂದು ಮಾಧ್ಯಮಗಳು ಮೌಢ್ಯವನ್ನು ಬಿತ್ತರಿಸುವ ಕಾರ್ಯಕ್ರಮಗಳಿಗೆ ಇನ್ನು ಕೆಲವು ಮಾಧ್ಯಮಗಳು ಸಿನಿಮಾ, ಕ್ರಿಕೆಟ್, ಸೆಲೆಬ್ರಿಟಿಗಳ ಆಗು ಹೋಗುಗಳಿಗೆ ಮಾತ್ರ ಹೆಚ್ಚಿನ ಮಹತ್ವ ನೀಡುತ್ತವೆ. ಇದು ಒಂದು ಸುದ್ದಿನಾ? ಎಂದು ಜನ ಕೇಳಿದರೆ, ಇಂಥಾ ಸುದ್ದಿಗಳನ್ನೇ ಜನರು ಇಷ್ಟಪಡುತ್ತಾರೆ ಎಂಬ ಉತ್ತರವನ್ನು ಮಾಧ್ಯಮದವರು ನೀಡುತ್ತಾರೆ. ಅದರ ಮಧ್ಯೆಯೇ ಕಾಸಿಗಾಗಿ ಸುದ್ದಿ ಮಾಡಿದ ಮಾಧ್ಯಮಗಳನ್ನೂ ನಾವು ನೋಡಿದ್ದೇವೆ. ಇಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು? ಎಲ್ಲವೂ ಬ್ರೇಕ್ ನಂತರ…
ಬಡವ-ಶ್ರೀಮಂತರ ನಡುವಿನ ಅಂತರ
ಭಾರತದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 6- 8 ರವರೆಗೆ ಇದೆ. ಆದರೂ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಜಾಸ್ತಿ ಇದೆ. ನಮ್ಮ ದೇಶದಲ್ಲಿ ಪ್ರತೀ 30 ನಿಮಿಷಕ್ಕೆ ಒಬ್ಬ ಆತ್ಮಹತ್ಯೆ ಮಾಡುತ್ತಿದ್ದಾನೆ. ಧನಿಕರು ಧನಿಕರ ಪಟ್ಟಿಯಲ್ಲಿ ಮತ್ತೆ ಮತ್ತೆ ಅದೇ ಸ್ಥಾನವನ್ನು ಉಳಿಸಿಕೊಳ್ಳುತ್ತಾ ಬೀಗುತ್ತಿದ್ದರೆ, ಇತ್ತ ಕೃಷಿ ಮಾಡುವ ಕೃಷಿಕ ಸಾಲದ ಹೊರೆ ತಾಳಲಾರದೆ ನೇಣಿಗೆ ಶರಣಾಗುತ್ತಿದ್ದಾನೆ.
ರಾಜಕೀಯ ಕೆಸರೆರೆಚಾಟ, ರಾಜ್ಯಗಳಲ್ಲಿನ ಅಭದ್ರತೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೊಬ್ಬ ನಾಯಕನನ್ನು ಆರಿಸಿ ಕಳುಹಿಸುತ್ತೇವೆ. ಅವರ ಮೇಲೆ ಪ್ರತಿಯೊಬ್ಬ ಪ್ರಜೆಯೂ ಭರವಸೆ ಇಟ್ಟುಕೊಂಡಿರುತ್ತಾನೆ. ಆದರೆ ಗದ್ದುಗೆಗೇರಿದ ಮೇಲೆ ನಾಯಕನಿಗೆ ಜನರ ಬಗ್ಗೆ ಮರೆತೇ ಹೋಗುತ್ತದೆ. ಐದು ವರುಷಕ್ಕೊಮ್ಮೆ ಚುನಾವಣೆ ಬಂದಾಗ ಅದೇ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸಿ, ನಮ್ಮ ಮಾತುಗಳಿಗೆ ಕಿವಿಯಾಗುತ್ತಾರೆ. ಗೆದ್ದ ಮೇಲೆ ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಾ ಹಣ ಗಳಿಸುವಲ್ಲಿ ತಲ್ಲೀನರಾಗಿ ಬಿಡುತ್ತಾರೆ . ನಮ್ಮನ್ನಾಳುವ ಜನರೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು, ಪರಸ್ಪರ ಕೆಸರೆರೆಚಾಟ ಮಾಡುತ್ತಿದ್ದರೆ, ಅಂಥವರಿಂದ ದೇಶದ ಅಭಿವೃದ್ಧಿಯನ್ನು ಬಯಸಲು ಸಾಧ್ಯವೆ? ದೇಶದ ಪ್ರಗತಿಗಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ ಸಂವಿಧಾನದ ಬಗ್ಗೆಯೂ ಕಿಂಚಿತ್ ಗೌರವ ತೋರಿಸದ ರಾಜಕಾರಣಿಗಳು ಸಂಸತ್ ಅಧಿವೇಶನಗಳಲ್ಲಿ ಮಾತು ಆಲಿಸಿದ್ದಕ್ಕಿಂತ ಗದ್ದಲವೆಬ್ಬಿಸಿ ಅಧಿವೇಶನಕ್ಕೆ ಧಕ್ಕೆ ತಂದಿರುವುದೇ ಹೆಚ್ಚು!.
ಈಶಾನ್ಯ ರಾಜ್ಯ ಮತ್ತು ಜಮ್ಮು ಕಾಶ್ಮೀರದಲ್ಲಿನ ಸಂಘರ್ಷ
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿ ಮೊದಲಾದ ಈಶಾನ್ಯ ರಾಜ್ಯಗಳು, ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಸಂಘರ್ಷಗಳು, ಉಗ್ರರ ದಾಳಿಗಳು ನಡೆಯುತ್ತಲೇ ಇರುತ್ತವೆ. ಉಗ್ರರ ಭೀತಿಯಿಂದಿರುವ ಈ ರಾಜ್ಯಗಳಲ್ಲಿ ಅಭದ್ರತೆ ಕಾಡುತ್ತಲೇ ಇರುತ್ತದೆ.
ಪರಿಸರ ಮಾಲಿನ್ಯ
ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗಲೇ ಇತ್ತ, ನಮ್ಮ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ. ಕೈಗಾರಿಕೋದ್ಯಮದಲ್ಲಿ ಪ್ರಗತಿ ಸಾಧಿಸುತ್ತಿದ್ದಂತೆ ಜಲ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚುತ್ತಿದ್ದೆ. ನಗರೀಕರಣದಿಂದಾಗಿ ಕೃಷಿ ಭೂಮಿ ನಾಶವಾಗುತ್ತಿದೆ. ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ಕಸದ ಸಮಸ್ಯೆ. ಜನ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮಾಲಿನ್ಯವೂ ವಿಸ್ತರಿಸುತ್ತಿದೆ. ಅದನ್ನು ನಿಯಂತ್ರಿಸುವುದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ಗೊತ್ತಿದ್ದರೂ, ನಾವ್ಯಾಕೆ ಮಾಡಬೇಕು? ಎಂಬ ಉಡಾಫೆಯಿಂದಲೇ ನಾವು ಬದುಕು ಸಾಗಿಸುತ್ತೇವೆ. ಸ್ವಚ್ಛ ಭಾರತ ಅಭಿಯಾನ ಆರಂಭವಾದಾಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಸಾಮಾಜಿಕ ತಾಣಗಳಲ್ಲಿ ಫೋಟೋಗಳ ರಾರಾಜಿಸಿದವು. ಆದರೆ ಅದೇ ಉತ್ಸಾಹ ನಮ್ಮಲ್ಲಿದೆಯೇ? ನಮ್ಮ ಮನೆಯ ಸುತ್ತಲೂ ಸ್ವಚ್ಛವಾಗಿಡುವ ನಾವು ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಬೇಕು ಎಂಬುದನ್ನು ಮರೆಯುತ್ತೇವೆ. ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ, ಕಸ ಬಿಸಾಡುತ್ತಾ ಬಿಂದಾಸ್ ಆಗಿ ಇರ್ತೀವಿ. ಕಸ ವಿಲೇವಾರಿ ಕೆಲಸ ಪೌರ ಕಾರ್ಮಿಕರದ್ದು ನಮಗ್ಯಾಕೆ ಅದರ ಉಸಾಬರಿ ಎಂಬ ಮನೋಭಾವವೇ ಅಲ್ಲವೇ ಇದಕ್ಕೆ ಕಾರಣ?
ನೆರೆಹೊರೆ ರಾಷ್ಟ್ರಗಳ ಕಿರಿಕಿರಿ, ಆತಂಕ
ನಮ್ಮ ನೆರೆ ರಾಜ್ಯಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದಿಂದ ಆಗ್ಗಾಗ್ಗೆ ಉಗ್ರರು ನುಸುಳುತ್ತಲೇ ಇರುತ್ತಾರೆ. ಪಾಕಿಸ್ತಾನವಂತೂ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇರುತ್ತದೆ. ಈ ಎಲ್ಲ ರಾಷ್ಟ್ರಗಳಿಂದ ಭಾರತ ಬಲಿಷ್ಠ ಆಗಿದ್ದರೂ ಭಯೋತ್ಪಾದನೆಯ ಆತಂಕದ ಕರಿಛಾಯೆ ಯಾವತ್ತೂ ನಮ್ಮ ದೇಶದ ಮೇಲೆ ಇದ್ದೇ ಇರುತ್ತದೆ.
ಸಾಕ್ಷರತೆಯ ಕೊರತೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ
ಭಾರತದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯನ ಬದುಕಿಗೆ ಅಗತ್ಯವಾದ ವಸ್ತುಗಳ ಪೂರೈಕೆಯೂ ಕಷ್ಟವಾಗುತ್ತಿದೆ. ಒಂದೆಡೆ ಬಡತನ, ಸಾಕ್ಷರತೆಯ ಕೊರತೆ ನಮ್ಮನ್ನು ಕಾಡುವಾಗ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಾಶವಾಗುತ್ತಿದೆ. ದುಡಿಯಲು ಭೂಮಿಯಿಲ್ಲ, ಕಲಿತವನಿಗೆ ಉದ್ಯೋಗವಿಲ್ಲ. ಇಲ್ಲಿಂದ ಅನ್ಯ ರಾಷ್ಟ್ರಗಳಿಗೆ ಪ್ರತಿಭಾ ಪಲಾಯನವಾಗುತ್ತಿದೆ. ನಿರುದ್ಯೋಗದ ಸಮಸ್ಯೆ ದಿನೇ ದಿನೇ ವರ್ಧಿಸುತ್ತಿವೆ. ಕೃಷಿ, ಗುಡಿ ಕೈಗಾರಿಕೆ, ಜಾನಪದ ಕಲೆಗಳು ಮೂಲೆ ಗುಂಪಾಗುತ್ತಿವೆ. ಬದಲಾಗುವ ಕಾಲದೊಂದಿಗೆ ಭಾರತೀಯರು ಬದಲಾಗುತ್ತಿದ್ದಾರೆ. ನಮ್ಮ ನಾಡಿನ ಸೊಗಡನ್ನು ಉಳಿಸಿಕೊಂಡು ಅಭಿವೃದ್ಧಿಯ ದಾರಿಯನ್ನು ತುಳಿಯುವ ಜನತೆ ನಮ್ಮಲ್ಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚುತ್ತಿದ್ದಂತೆ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಬರುವ ಬದಲು ಇತಿಹಾಸದ ಪುಟಗಳಲ್ಲಿಯೇ ಉಳಿದುಕೊಂಡಿದೆ.
-ಅಂಜಲಿ
1 Comment
100 % curenct