ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ ಬೆನ್ನಲ್ಲಿಯೇ ಭಾರತಕ್ಕೆ ಪಾಕಿಸ್ತಾನದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ಬಸಿತ್ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಬಸಿತ್, ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿರುವ ಕಾಶ್ಮೀರದ ಜನತೆಗೆ ಪಾಕಿಸ್ತಾನ ನೆರವಾಗಲು ಸದಾ ಸಿದ್ದವಿದ್ದು ಕಾಶ್ಮೀರದ ಜನತೆ ತಮ್ಮ ಹಕ್ಕನ್ನು ಪಡೆದುಕೊಳ್ಳಲು ನಮ್ಮ ಬೆಂಬಲವಿದೆ ಎನ್ನುವ ಮೂಲಕ ವಿವಾದಕ್ಕೆ ಕಾರಣರಾದರು.
ಅಷ್ಟೇ ಅಲ್ಲ, ಪಾಕಿಸ್ತಾನ ಭಾರತದೊಂದಿಗೆ ಸದಾ ಉತ್ತಮ ಸಂಬಂಧವನ್ನು ಬಯಸುತ್ತಿದ್ದು ಅದರ ಜತೆಗೇ ಕಾಶ್ಮೀರಿಗಳು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಪಾಕ್ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದರು.
ಬಸಿತ್ ಅವರ ಈ ಹೇಳಿಕೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು ಪಾಕಿಸ್ತಾನದ ಇಬ್ಬಗೆ ನೀತಿ ಮತ್ತೊಮ್ಮೆ ಬಹಿರಂಗವಾದಂತಾಗಿದೆ.