ಹೊಸದಿಲ್ಲಿ: ಪುಣೆ ಸಿನಿಮಾ ವಿದ್ಯಾರ್ಥಿಗಳಂತೆ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನಿವೃತ್ತ ಯೋಧರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸ್ವಾಗತ ಸಿಗಲಿಲ್ಲ. ಬದಲಿಗೆ ವಾಪಸ್ ಹೋಗಿ ಎಂಬ ಕೂಗು ಕೇಳಿಬಂತು.
ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ವೇಳೆ ರಾಹುಲ್ ಗಾಂಧಿಗೆ ಸಿಕ್ಕ ಪ್ರತಿಕ್ರಿಯೆ ಇದು. ಆದರೆ ಇದರಿಂದ ತಾಳ್ಮೆ ಕಳೆದುಕೊಳ್ಳದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಕೂಡಲೇ ಏಕರೂಪ ಪಿಂಚಣಿ ಜಾರಿಗೊಳಿಸುವ ದಿನಾಂಕವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ದೇಶದ ಭದ್ರತಾ ಪಡೆಗಳ ಸಿಬ್ಬಂದಿ ಹಾಗೂ ಯೋಧರು ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಅವರೀಗ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಇಲ್ಲಿಂದ ತೆರವುಗೊಳಿಸಬಾರದು ಎಂದು ರಾಹುಲ್ ನುಡಿದರು.
ನಿವೃತ್ತ ಯೋಧರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಬಂದು ಪ್ರತಿಭಟನೆಯಲ್ಲಿ ಶುಕ್ರವಾರ ಪಾಲ್ಗೊಳ್ಳಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಜ್ಜಾಗಿ ಬಂದಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿ, ರಾಹುಲ್ ಗಾಂಧಿ ವಾಪಸ್ ಜಾವೋ ಎಂದು ಘೋಷಣೆ ಕೂಗಿದರು. ನಿವೃತ್ತ ಸೈನಿಕರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ರಾಹುಲ್ ಗಾಂಧಿ ಮುಜುಗರ ಅನುಭವಿಸುವಂತಾಗಿತ್ತು.
ನಿವೃತ್ತ ಸೈನಿಕರು ಕಳೆದ ಎರಡು ತಿಂಗಳಿಂದ ಒನ್ ರಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ದಿಲ್ಲಿ ಪೊಲೀಸರು ನಿವೃತ್ತ ಸೈನಿಕರ ಪ್ರತಿಭಟನೆ ಸ್ಥಗಿತಗೊಳಿಸಿ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವ ಸಂಬಂಧ ಈ ಪ್ರದೇಶದಿಂದ ತೆರವುಗೊಳಿಸುವ ಯತ್ನ ಶುಕ್ರವಾರ ನಡೆಯಿತು. ಆದರೆ ಅದನ್ನು ಮಾಜಿ ಸೈನಿಕರು ನಿರಾಕರಿಸಿದರಲ್ಲದೆ ತೀವ್ರವಾಗಿ ಪ್ರತಿರೋಧಿಸಿದರು.
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಸ್ವಾತಂತ್ರ್ಯ ದಿನದಂದು ಒನ್ ರಾಂಕ್ ಒನ್ ಪೆನ್ಶನ್ ಯೋಜನೆ ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ಈ ಯೋಜನೆ ಜಾರಿಗೆ ಬಂದರೆ 25 ಲಕ್ಷ ನಿವೃತ್ತ ಸೈನಿಕರಿಗೆ ಅನುಕೂಲವಾಗಲಿದೆ.