ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ರಕ್ತದೋಕುಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳು ಸಂಚು ರೂಪಿಸಿದ್ದು, 26/11 ಮಾದರಿಯಂತೆ ದಾಳಿ ನಡೆಸಲು ಯೋಜನೆ ರೂಪಿಸಿದೆ. ಉಗ್ರರ ಕಣ್ಣು ಇದೀಗ ಏರ್ ಇಂಡಿಯಾ ವಿಮಾನ ಹಾಗೂ ಬಿಜೆಪಿ ಕಚೇರಿ ಮೇಲೆ ಬಿದ್ದಿದ್ದು, ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆಯು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ಗುರುದಾಸ್ ಪುರ ದಾಳಿಯ ಬಳಿಕ ಈ ಬಾರಿ ಉಗ್ರರು ವಾಯು ಮೂಲ ಬಳಸಿ ದಾಳಿ ಮಾಡಲು ಸಂಚು ರೂಪಿಸಿದ್ದು, ಪ್ಯಾರಾಗ್ಲೈಡರ್ ಮೂಲಕ ಉನ್ನತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಲಿದ್ದಾರೆ. ಇದೀಗ ವಿಮಾನ ಹೈಜಾಕ್ ಮಾಡಲು ಉಗ್ರರು ಚಿಂತನೆ ನಡೆಸಿದ್ದು, ನಾನಾ ಕಡೆಗಳಲ್ಲಿ ದಾಳಿ ನಡೆಸುವದರೊಂದಿಗೆ ಏರ್ ಇಂಡಿಯಾ ವಿಮಾನ ಹೈಜಾಕ್ ಮಾಡಲಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಗೃಹ ಇಲಾಖೆಯು ದಾಳಿ ತಡೆಯಲು ತಯಾರಾಗುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಉಗ್ರರು ನವದೆಹಲಿಯ ಲೋಟಸ್ ಟೆಂಪಲ್, ನೋಯ್ಡಾದ ಮಾಲ್ ಗಳು, ಮೆಟ್ರೋ ನಿಲ್ದಾಣ, ಕೆಂಪುಕೋಟೆ ಹಾಗೂ ವಿವಿಐಪಿ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಅಲ್ ಖೈದಾ ಉಗ್ರ ಸಂಘಟನೆಯು ಭಾರತದ ಮೇಲೆ ತನ್ನ ಕೆಂಗಣ್ಣನ್ನಿಟ್ಟಿದ್ದು, ಮುಂಬಿಯಿ, ಕಾರವಾರ, ಕೊಚ್ಚಿ ಮತ್ತು ಗುಜರಾತ್ ನ ನೌಕಾನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ.