ಗುವಾಹಟಿ: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಲ್ಲಿ ಶುಕ್ರವಾರ ಕಾಂತಪುರ್ ಲಿಬರೇಷನ್ ಸಂಫಟನೆಯ ಉಗ್ರಗಾಮಿಗಳು ರೈಲ್ವೆ ಹಳಿಯನ್ನು ಸ್ಪೋಟಿಸಲೆತ್ನಿಸಿದ ಪ್ರಯತ್ನವನ್ನು ಸೇನಾಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ವಿಫಲಗೊಂಡಿದೆ.
ಕೋಕ್ರಜಾರ್ ಮತ್ತು ಗುವಾಹಟಿ ರೈಲ್ವೆ ನಿಲ್ದಾಣ ಸಮೀಪ ರೈಲ್ವೆ ಹಳಿ ಮೇಲೆ ಇಟ್ಟಿದ್ದ ಸ್ಪೋಟಕಗಳನ್ನು ವಶಪಡಿಸಿಕೊಂಡು ಓರ್ವ ಉಗ್ರಗಾಮಿಯನ್ನು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಲ್.ಆರ್.ಬಿಶ್ನೋಯಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ರಾತ್ರಿ ಸುಮಾರು 11.45ರ ಹೊತ್ತಿಗೆ ಪೊಲೀಸರು ಮತ್ತು ಉಗ್ರಗಾಮಿಗಳ ನಡುವೆ ದಾಳಿ ನಡೆಯಿತು.ಇದರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿದ್ದಾನೆ.
ಸ್ಥಳದಿಂದ 7 ಕೆ.ಜಿ ತೂಕದ ಸ್ಪೋಟಕ, ಪಿಸ್ತೂಲ್, ಮದ್ದುಗುಂಡುಗಳು, ಗ್ರೆನೇಡ್, ಮೊಬೈಲ್ ಸಿಮ್ ಮತ್ತು ಒಂದು ಕೈ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಮತ್ತೊಂದೆಡೆ ನಗೌನ್ ಜಿಲ್ಲೆಯಲ್ಲಿ ಪೊಲೀಸರು ಮನೆಯೊಂದರಿಂದ ಮೂರು ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ನಾಜಿಮುದ್ದೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.