ನವದೆಹಲಿ: ಐಪಿಎಲ್ ನ ಕಳಂಕಿತ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ವಿಷಯದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಮುಖ ವಿಷಯಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
ಲಲಿತ್ ಮೋದಿ ಅವರಿಗೆ ಸಹಾಯ ಮಾಡುವ ಮನೋಭಾವ ನಿಜವಾಗಿಯೂ ಸುಷ್ಮಾ ಸ್ವರಾಜ್ ಅವರಿಗೆ ಇದ್ದಿದ್ದರೆ, ಪೋರ್ಚ್ ಗಲ್ ಗೆ ಪ್ರಯಾಣಿಸಲು ತಾತ್ಕಾಲಿಕ ಪ್ರಯಾಣ ದಾಖಲೆಗಳನ್ನು ಒದಗಿಸುವಂತೆ ಇಂಗ್ಲೆಂಡಿನಲ್ಲಿರುವ ಭಾರತದ ಉನ್ನತ ಆಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಲಲಿತ್ ಮೋದಿ ಅವರಿಗೆ ಏಕೆ ಸೂಚಿಸಿರಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಬದಲಾಗಿ ಬ್ರಿಟಿಷ್ ಪ್ರಯಾಣ ವೀಸಾವನ್ನು ನೀಡಲು ಅವರು ಏಕೆ ನಿರ್ಧರಿಸಿದ್ದರು? ಈ ವಿಷಯದಲ್ಲಿ ಸರ್ಕಾರ ಏನೋ ಮುಚ್ಚಿಡಲು ಯತ್ನಿಸುತ್ತಿದೆ. ಲಲಿತ್ ಮೋದಿ ಅವರ ಸಂಪೂರ್ಣ ಪತ್ರವನ್ನು ಬಿಡುಗಡೆ ಮಾಡದೆ ಇಂಗ್ಲೆಂಡಿನ ಹಣಕಾಸು ಸಚಿವರಿಗೆ ಬರೆದ ಪತ್ರವನ್ನು ಮಾತ್ರ ಏಕೆ ಬಿಡುಗಡೆ ಮಾಡಲಾಗಿದೆ ಎಂದು ಕೇಳಿದ್ದಾರೆ.
ಸಂಸತ್ತಿನಲ್ಲಿ ಈ ವಿಷಯ ಕುರಿತು ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದ್ದ ಸುಷ್ಮಾ ಸ್ವರಾಜ್ ಅವರು ಚರ್ಚೆ ನಡೆಸದೆ ಸದನದಲ್ಲಿ ವಿರೋಧ ಪಕ್ಷದವರನ್ನು ಟೀಕಿಸಿದ್ದಾರೆ. ಮಾತುಕತೆ ನಡೆಸದೆ ಭಾಷಣ ಮಾಡಿದ್ದಾರೆ. ಅವರಿಂದ ಉತ್ತರ ಸಿಕ್ಕದೆ ಉಪದೇಶ ಸಿಕ್ಕಿದೆ. ನಿಜವಾದ ವಿಷಯ ಸಿಕ್ಕದೆ ನಮ್ಮ ಬಾಯಿಗೆ ಮಿಠಾಯಿ ತುರುಕಲಾಗಿದೆ. ಬಿಜೆಪಿ ಸಹ ಸುಷ್ಮಾ ಅವರ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಂಡಿದೆ ಎಂದು ಟೀಕಿಸಿದರು.
ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿಯವರು, ಭೋಫೋರ್ಸ್ ಹಗರಣದ ಪ್ರಮುಖ ಆರೋಪಿ ಒಟ್ಟಾವಿಯಾ ಕ್ವಟ್ರೋಚ್ಚಿ ಮತ್ತು ಭೋಪಾಲ್ ಅನಿಲ ಸೋರಿಕೆಯ ಆರೋಪಿ ವಾರನ್ ಆಂಡೆರ್ಸನ್ ಅವರಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಿದ್ದರು ಎಂಬ ಸುಷ್ಮಾ ಸ್ವರಾಜ್ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚಿದಂಬರಂ, ಮಾಜಿ ಪ್ರಧಾನಿಯೊಬ್ಬರ ವಿರುದ್ಧ ನೀಡಿರುವ ತಪ್ಪು ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಅವರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.