ಹೊಸದಿಲ್ಲಿ: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ವ್ಯರ್ಥವಾಗಿ ಕಳೆದಹೋದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ, ಕಾಂಗ್ರೆಸ್ ಧೋರಣೆಯನ್ನು ತುರ್ತು ಪರಿಸ್ಥಿತಿಯ ದಿನಗಳಿಗೆ ಹೋಲಿಸಿದ್ದಾರೆ.
‘ಕಾಂಗ್ರೆಸ್ ಒಂದು ಕುಟುಂಬದ ರಕ್ಷಣೆಗೆ ನಿಂತಿದೆ. ಬಿಜೆಪಿ ದೇಶವನ್ನು ರಕ್ಷಿಸಲು ಬಯಸಿದೆ,’ಎಂದು ಎನ್‌ಡಿಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗಾಂಧಿ ಕುಟುಂಬದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪ್ರಧಾನಿ, ‘ಅಧಿಕಾರ ಕೇವಲ ತಮ್ಮ ಕುಟುಂಬದಲ್ಲಿರಬೇಕು ಎಂಬ ಬಯಕೆ ಅವರದ್ದು,’ ಎಂದು ದೂರಿದ್ದಾರೆ.
‘ಸಂಸತ್ ಕಲಾಪಕ್ಕೆ ಕಾಂಗ್ರೆಸ್ ಯಾವ ರೀತಿ ಅಡ್ಡಿಪಡಿಸಿತು ಎಂಬುದನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡಿ. ಕಾಂಗ್ರೆಸ್ ಅಜೆಂಡಾವನ್ನು ಜನರ ಮುಂದಿಡಿ,’ಎಂದು ಪಕ್ಷದ ಸಂಸದರಿಗೆ ಪ್ರಧಾನಿ ಕಿವಿ ಮಾತು ಹೇಳಿದ್ದಾರೆ.
ತಿವಾರಿ ತಿರುಗೇಟು:
ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ,’ಕಲಾಪ ನಡೆಸುವುದು ಸರಕಾರದ ಜವಾಬ್ದಾರಿ ಎಂಬುದನ್ನು ಪ್ರಧಾನಿ ನೆನಪಿನಲ್ಲಿಟ್ಟುಕೊಳ್ಳಬೇಕು,’ ಎಂದಿದ್ದಾರೆ.
‘ಸದನದ ಕಲಾಪ ನಡೆಯದಿದ್ದರೆ, ಅದಕ್ಕೆ ಪ್ರಧಾನಿಯೇ ಹೊಣೆ. ಸದನದಲ್ಲಿ ಪ್ರತಿಪಕ್ಷದವರನ್ನು ಎದುರಿಸುವ ಧೈರ್ಯವೂ ಅವರಿಗಿಲ್ಲ,’ಎಂದು ತಿವಾರಿ ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಯಾವುದೇ ಕಲಾಪ ನಡೆಯದೇ, ಲೋಕಸಭೆ ಹಾಗೂ ರಾಜ್ಯಸಭೆಯನ್ನು ಗುರುವಾರ ಅನಿರ್ದಿಷ್ಟಾವಧಿ ಮುಂದೂಡಿದ ನಂತರ ಸರಕಾರ ಹಾಗೂ ಪ್ರತಿಪಕ್ಷಗಳು ಪರಸ್ಪರ ಕೆಸರೆರಾಚಟ ನಡೆಸಿವೆ.