ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗುತ್ತಿದ್ದ ಪುತ್ರಿಯನ್ನು ಬೇರೆಯವರು ಆಕೆಯ ದೇಹವನ್ನು ಸ್ಪರ್ಶಿಸಬಾರದು ಎನ್ನುವ ಉದ್ದೇಶದಿಂದ ಜೀವರಕ್ಷಣೆ ಪಡೆಯ ಅಧಿಕಾರಿಗಳನ್ನು ತಡೆದು ಆಕೆಯ ರಕ್ಷಣೆಗೆ ತಾನೇ ಮುಂದಾಗಿ ವಿಫಲವಾದ ಘಟನೆ ವರದಿಯಾಗಿದೆ.
ಏಷ್ಯಾ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ರಜಾ ದಿನಗಳನ್ನು ಕಳೆಯಲೆಂದು ತನ್ನ 20 ವರ್ಷದ ಪುತ್ರಿಯ ಜೊತೆ ಬಂದಿದ್ದ. ದುಬೈ ಬೀಚ್‌ನಲ್ಲಿ ಈಜುತ್ತಿದ್ದ ಪುತ್ರಿ ಜೋರಾಗಿ ಕೂಗುತ್ತಾ ಸಹಾಯ ಮಾಡಿ ನಾನು ಮುಳುಗುತ್ತಿದ್ದೇನೆ ಎಂದು ಕೂಗಿದ್ದಾಳೆ.
ನನ್ನ ಪುತ್ರಿಯನ್ನು ಅಪರಿಚಿತರು ಮುಟ್ಟುವುದಕ್ಕಿಂತ ಆಕೆ ಸತ್ತುಹೋಗುವುದೇ ಲೇಸು ಎಂದು ಭಾವಿಸಿದ ತಂದೆ, ಜೀವರಕ್ಷಣಾ ಪಡೆಗಳಿಗೆ ಪುತ್ರಿಯ ರಕ್ಷಣೆಗೆ ಹೋಗದಂತೆ ತಡೆಯೊಡ್ಡಿದ್ದಾನೆ. ಆದರೆ,ಆಕೆಯ ರಕ್ಷಣೆಯಲ್ಲಿ ವಿಳಂಬವಾಗಿದ್ದರಿಂದ ಯುವತಿ ತನ್ನ ಜೀವವನ್ನು ಕಳೆದುಕೊಂಡಿದ್ದಾಳೆ ಎಂದು ದುಬೈ ಹಿರಿಯ ಪೊಲೀಸ್ ಅಧಿಕಾರಿಯಾದ ಅಹ್ಮದ್ ಬುರ್ಕಿಭಾ ತಿಳಿಸಿದ್ದಾರೆ.
ದುಬೈ ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.