ಚೆನ್ನೈ: ಚಿನ್ನದ ದರ ದಿನೇ ದಿನೇ ಕುಸಿಯುತ್ತಿದ್ದರೂ ಹೊರ ದೇಶಗಳಿಂದ ಕಳ್ಳ ಸಾಗಾಣಿಕೆಯಾಗುತ್ತಿರುವುದೇನೂ ನಿಂತಿಲ್ಲ. ಆದರೆ ಹಳದಿ ಲೋಹವನ್ನು ದೇಶದೊಳಗೆ ತರಲು ಇವರುಗಳು ಅನುಸರಿಸುತ್ತಿರುವ ವಿಧಾನಗಳನ್ನು ಕೇಳಿದರೆ ಗಾಬರಿ ಹುಟ್ಟಿಸುತ್ತದೆ.
ಚಿನ್ನವನ್ನು ಅಕ್ರಮವಾಗಿ ತರುವ ಸಲುವಾಗಿ ಪ್ರಾಣವನ್ನೇ ಪಣವಾಗಿಡುತ್ತಿರುವ ಕಳ್ಳ ಸಾಗಾಣಿಕೆದಾರರು ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಅಂತಹುದೇ ಪ್ರಕರಣ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಅಕ್ರಮವಾಗಿ ಚಿನ್ನ ತಂದ ಇಬ್ಬರನ್ನು ಬಂಧಿಸಿರುವ ಪೊಲೀಸರು 70 ಲಕ್ಷ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಕೌಲಾಲಂಪೂರ್ ನಿಂದ ಮಲೇಶೀಯಾ ಏರ್ಲೈನ್ಸ್ ನಲ್ಲಿ ಬಂದಿಳಿದ ಪ್ರಯಾಣಿಕನೊಬ್ಬ ಎರಡು ಚಿನ್ನದ ಬಿಸ್ಕೇಟ್ ಗಳನ್ನು ತನ್ನ ಶೂ ಗಳಲ್ಲಿ ಅಡಗಿಸಿಟ್ಟುಕೊಂಡಿದ್ದು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಕೌಲಾಲಂಪೂರ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕ ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟುಕೊಂಡಿದ್ದು ಅದನ್ನೀಗ ಹೊರ ತೆಗೆಯುವ ಕಾರ್ಯ ನಡೆದಿದೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 70 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.