ಪಾಟ್ನ: ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತವನ್ನು ಅಂತ್ಯಗೊಳಿಸಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಗೆಲ್ಲಿಸಿ ರಾಜ್ಯವು ಅಭಿವೃದ್ಧಿ ಹಾಗೂ ಪರಿವರ್ತನೆಯಾಗುವಂತೆ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇನ್ನು ಕೆಲವೇ ತಿಂಗಳಲ್ಲಿ ಬಿಹಾರದಲ್ಲಿ ನಡೆಯುವ ವಿಧಾನಸಭಾ ಚುನಾವಣಾ ಸಂಬಂಧ ಇಂದು ಬಿಹಾರದ ಗಯಾ ಪ್ರದೇಶದಲ್ಲಿ ನಡೆದ ಎನ್ ಡಿಎ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಬಿಹಾರದಲ್ಲಿ ಜಂಗಲ್ ರಾಜ್ ಆಡಳಿತವನ್ನು ಅಂತ್ಯಗೊಳಿಸಿ ಎನ್ ಡಿಎ ಸರ್ಕಾರವನ್ನು ಗೆಲ್ಲುವಂತೆ ಮಾಡಿ, ನಿಮ್ಮ ಜೊತೆ ಕೈ ಹಿಡಿದು ಬಿಹಾರ ಅಭಿವದ್ಧಿಯಾಗುವಂತೆ ಮಾಡುತ್ತೇನೆ. 4 ಸಾವಿರ ಕೋಟಿಗೂ ಅಧಿಕ ಹಣ ವ್ಯರ್ಥವಾಗಿದ್ದು, ಇಲ್ಲಿರುವ ಯುವ ಜನತೆ ಇದೀಗ ವಿದೇಶಕ್ಕೆ ಹೋಗಿ ಕೆಲಸ ಮಾಡುವಂತೆ ಆಗಿದೆ ಇದಕ್ಕೆಲ್ಲಾ ಜಂಗಲ್ ರಾಜನೇ ಕಾರಣ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಹಿಮಾಚಲ ಪ್ರದೇಶದಲ್ಲಿ 24, 000, ಒಡಿಶಾ 1, 13, 000 ಹಾಗೂ ಪಂಜಾಬ್ ನಲ್ಲಿ 1, 04, 000 ರಷ್ಟು ಇಂಜಿನಿಯರ್ ಸೀಟ್ ಗಳು ಖಾಲಿಯಿದೆ ಆದರೆ ಬಿಹಾರದಲ್ಲಿ ಕೇವಲ 25 ಸಾವಿರ ಸೀಟ್ ಗಳಷ್ಟೇ ಇದೆ. ಬಿಹಾರದಲ್ಲಿ ವಿದ್ಯಾರ್ಥಿಗಳು ಮುಂದುವರೆಯಲು ಅವಕಾಶಗಳೇ ಸಿಗುತ್ತಿಲ್ಲ. ಬಿಹಾರಕ್ಕಿಂತ ಸಿಕ್ಕಿಂ ಬಹಳ ಚಿಕ್ಕದು. ಆದರೆ, ಅಲ್ಲಿ ಬಿಹಾರಕ್ಕಿಂತ ಹೆಚ್ಚು ವಿದ್ಯುತ್ ಪ್ರಸರಣವಿದೆ. ಇದೆಕ್ಕೆಲ್ಲ ಕಾರಣ 25 ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿರುವ ಸರ್ಕಾರ. ಬಿಹಾರ ರಾಜ್ಯದಲ್ಲಿ ಇತ್ತೀಗಷ್ಟೇ ಬಿಜೆಪಿ ಕಾರ್ಯಕರ್ತನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು ಬಿಹಾರದಲ್ಲಿ ಯಾವ ರೀತಿಯ ಸರ್ಕಾರವಿದೆ ಎಂಬುದಕ್ಕೆ ಇದೇ ಪ್ರತ್ಯಕ್ಷ ಉದಾಹರಣೆ.
ಇಂದು ದೇಶದಲ್ಲಿ ಎಲ್ಲಿಯೇ ಘರ್ಷಣೆಯಾದರೂ, ಅಹಿಂಸಾತ್ಮಕ ಘಟನೆ ನಡೆದರೂ ಜನರು ಮೊದಲು ಚರ್ಚೆ ನಡೆಸುವುದು ಬಿಹಾರ ರಾಜ್ಯದ ಬಗ್ಗೆಯೇ. ಇನ್ನು ಮುಂದೆ ಬರುವ 5 ವರ್ಷವನ್ನು ಈ ಹಿಂದಿದ್ದ 25 ವರ್ಷಗಳಂತೆಯೇ ಮಾಡಿಕೊಂಡರೆ ಇದರ ಕೆಟ್ಟ ಪರಿಣಾಮ ಇಲ್ಲಿನ ಯುವ ಜನತೆ ಮೇಲೆ ಬೀರುತ್ತದೆ. ಬಿಹಾರ ಜನತೆಗೆ ಇದೀಗ ಎರಡು ಆಯ್ಕೆಗಳಿವೆ. ಒಂದು ಹೊಸ ಹಾಗೂ ಆಧುನಿಕ ಬಿಹಾರ ಮತ್ತೊಂದು ಬದಲಾವಣೆ. ಇದರಲ್ಲಿ ಬಿಹಾರ ಜನತೆ ಯಾವುದನ್ನೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
ಬೋಧ್ ಗಯಾ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವುದರಿಂದ ನಿರುದ್ಯೋಗದಲ್ಲಿ ನರಳುತ್ತಿರುವ ಇಲ್ಲಿನ ಜನತೆಗೆ ಉದ್ಯೋಗ ದೊರಕಿಸಿದಂತಾಗುತ್ತದೆ. ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳು ಇದೀಗ ಅಭಿವೃದ್ಧಿಯ ಹಾದಿಯಲ್ಲಿವೆ. ಬಿಹಾರ ರಾಜ್ಯದಲ್ಲಿಯೂ ಬದಲಾವಣೆಯಾಗಬೇಕಾದರೆ ಬಿಜೆಪಿ ನೇತೃತ್ವದ ಎನ್ ಡಿಎ ಪಕ್ಷಕ್ಕೆ ಮತ ನೀಡಿ. ನಾನಿಲ್ಲಿ ಬಂದಿರುವುದು ನಿಮ್ಮ ಆಶೀರ್ವಾದಕ್ಕಾಗಿ. ಇನ್ನು ಕೆಲವೇ ವರ್ಷಗಳಲ್ಲಿ ಬಿಹಾರ ರಾಜ್ಯ ಅನಾರೋಗ್ಯ ಪೀಡಿತ ಪ್ರದೇಶ ಎಂಬ ಖ್ಯಾತಿಯಿಂದ ಹೊರಬರಲಿದೆ ಎಂಬ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ಬಿಹಾರ ಜನತೆ ನನಗೆ ಸಾಕಷ್ಟು ಪ್ರೀತಿ ನೀಡಿದೆ. ಈ ಪ್ರೀತಿಯನ್ನು ನಾನು ಬಿಹಾರ ಜನತೆಗೆ ನೀಡಬೇಕು. ಅದನ್ನು ಬಿಹಾರವನ್ನು ಅಭಿವೃದ್ಧಿ ಮಾಡುವ ಮೂಲಕ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಬಿಜೆಪಿ ಮುಖಂಡರು ಸೇರಿದಂತೆ ಲಕ್ಷಾಂತರ ಜನ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.